ಅರಕಲಗೂಡು: ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಸೋಂಕಿತೆ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಬುಧವಾರ ಸಂಜೆ ಸೀಲ್‌ಡೌನ್ ಮಾಡಲಾಯಿತು.
ದೊಡ್ಡಮಗ್ಗೆ ಹೋಬಳಿ ದುಮ್ಮಿ ಗ್ರಾಮದ ಮಹಿಳೆ ಜ್ವರ ಬಂದ ಹಿನ್ನೆಲೆಯಲ್ಲಿ ದಿ. 21 ರಂದು ದೊಡ್ಡಮಗ್ಗೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಜ್ವರ ಕಡಿಮೆ ಆಗದ ಕಾರಣ ದಿ.22 ರಂದು ಅರಕಲಗೂಡಿನ ಧನ್ವಂತರಿ ಕ್ಲಿನಿಕ್‌ಗೆ ಹೋಗಿದ್ದರು.
ದಿ. 25ರಂದು ಕೊಣನೂರಿನ ಖಾಸಗಿ ಲ್ಯಾಬ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಾಗ ವೈದ್ಯರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸಿದರು. ಆದರೆ ಅವರು ಮರುದಿನ ಪರೀಕ್ಷೆಗೆ ಹಾಜರಾಗಲಿಲ್ಲ. ದಿ. 26ರ ಬುಧವಾರ ಮಧ್ಯಾಹ್ನ 1 ಗಂಟೆಗೆ ತೀವ್ರ ಉಸಿರಾಟದ ತೊಂದರೆಯಿಂದ ಮತ್ತೊಮ್ಮೆ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ತಕ್ಷಣ ಅವರಿಗೆ ತುರ್ತು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತಪಟ್ಟ ನಂತರ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್ ಮಾಡಲಾಗಿದೆ. ಆಸ್ಪತ್ರೆಯನ್ನು ಸಿಬ್ಬಂದಿಗಳು ಸಂಪೂರ್ಣ ಸ್ಯಾನಿಟೈಸ್ ಮಾಡಿ ಯಾವುದೇ ರೋಗಿಗಳಿಗೆ 24 ಗಂಟೆ ಪ್ರವೇಶ ನಿರ್ಬಂಧಗೊಳಿಸಲಾಗಿದೆ.