ಹಾಸನ: ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಗಟ್ಟಿ, ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಗರದ ರಾಜ ಕಾಲುವೆಯನ್ನು ನಗರಸಭೆ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು.
ಕಾಲುವೆಯಲ್ಲಿದ್ದ ಹೂಳು, ಕಸ, ಕಡ್ಡಿ, ಅಡೆ ತಡೆಗಳನ್ನು ಜೆಸಿಬಿ, ಇಟಾಚಿ ಮೂಲಕ ಮೂಲಕ ಹೊರ ಸಾಗಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಆನಂದ್ ಮಾತನಾಡಿ, ಪೃಥ್ವಿ ಥಿಯೆಟರ್‌ನಿಂದ ಹೌಸಿಂಗ್ ಬೋರ್ಡ್, ಆಡುವಳ್ಳಿ, ಜ್ಞಾನಾಕ್ಷಿ ಕಲ್ಯಾಣ ಮಂಟಪ ಬಳಿಯ ರಾಜ ಕಾಲುವೆವರೆಗೂ ಸ್ವಚ್ಛತೆ ಹಾಗೂ ಹೂಳು ಎತ್ತುವ ಕೆಲಸ ಮಾಡಲಾಗುತ್ತಿದೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಈ ಮುನ್ನ ಸರಿಯಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗುತ್ತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ವತಿಯಿಂದ ಜೆಸಿಬಿ, ಇಟಾಚಿ ಹಾಗೂ ಟಿಪ್ಪರ್ ಮೂಲಕ ಮಣ್ಣನ್ನು ತೆಗೆದು ಸಾಗಿಸಲಾಗುತ್ತಿದೆ. ಕಳೆದ 3 ವಾರದಿಂದ ನಿರಂತರವಾಗಿ ರಾಜ ಕಾಲುವೆಯನ್ನು ಸ್ವಚ್ಛ ಮಾಡಲಾಗುತ್ತಿದೆ ಎಂದರು.