ಹಾಸನ: ಚೆಕ್ ಪೋಸ್ಟ್ ಅಳವಡಿಸಿರುವ ರಸ್ತೆಗಳನ್ನು ಹೊರತುಪಡಿಸಿ ಸಣ್ಣ ದಾರಿಗಳ ಮೂಲಕ ಹೊರ ಜಿಲ್ಲೆಗಳಿಂದ ಪ್ರತಿದಿನ 80ರಿಂದ 100 ಜನ ಜಿಲ್ಲೆಯೊಳಗೆ ಬರುತ್ತಿದ್ದಾರೆ. ಅಂತವರನ್ನು ಪತ್ತೆ ಹಚ್ಚಿ ಮುದ್ರೆ ಹಾಕಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಹೊರ ಜಿಲ್ಲೆಗಳಿಂದ ಬರುತ್ತಿರುವವರ ಬಗ್ಗೆ ಪ್ರತಿದಿನ ಮಾಹಿತಿ ಕಲೆಹಾಕಿ ವರದಿ ನೀಡಬೇಕು. ಏ. 13ರಿಂದ ಈಚೆಗೆ ಜಿಲ್ಲೆಯೊಳಗೆ ಬಂದವರೆಲ್ಲರಿಗೂ ಕಡ್ಡಾಯವಾಗಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಿ ಎಂದು ಸೂಚನೆ ನೀಡಿದರು.
ಕೊರೊನಾ ಶಂಕಿತರ ಸಂಪರ್ಕಕ್ಕೆ ಬಂದವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಹಾಗೂ ಯಾವ ಯಾವ ಅಧಿಕಾರಿಗಳು ಯಾವ ಯಾವ ಕೆಲಸ ಮಾಡಬೇಕು ಎಂದು ಪಿಪಿಟಿ ಮೂಲಕ ಈಗಾಗಲೇ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ ಎಲ್ಲರೂ ನಿಗಾ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ನಿರಾಶ್ರಿತರಿಗೆ ಯಾವುದೇ ಕಾರಣಕ್ಕೂ ಆಹಾರ ಪೂರೈಕೆಯಲ್ಲಿ ಕೊರತೆಯಾಗಬಾರದು. ಅದಕ್ಕಾಗಿ ಎಸ್.ಡಿ.ಆರ್.ಎಫ್ನಿಂದ ಬಿಡುಗಡೆ ಮಾಡಲಾಗಿರುವ ಹಣವನ್ನು ಬಳಸಿಕೊಳ್ಳಿ. ಅಲ್ಲದೇ ಆಹಾರ ನಿಗಮದಿಂದ ಕಡಿಮೆ ದರದಲ್ಲಿ ಅಕ್ಕಿ ಹಾಗೂ ಗೋಧಿಯನ್ನು ನೀಡಲಾಗುತ್ತದೆ. ನಿರಾಶ್ರಿತರಿಗೆ ಆಹಾರ ಸರಬರಾಜು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಎಫ್.ಸಿ.ಐನಲ್ಲಿ ಖರೀದಿಸುವಂತೆ ತಿಳಿಸಿ ಹಾಗೂ ಯಾವುದೇ ತಾಲೂಕಿನಲ್ಲಿ ಆಹಾರ ವಿತರಣೆಗೆ ಸಮಸ್ಯೆಯಾಗುತ್ತಿದ್ದರೆ ಕೂಡಲೇ ವರದಿ ನೀಡಿ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸವಿತಾ ಮಾತನಾಡಿ, ಪ್ರತಿಯೊಂದು ದಿನಸಿ ಅಂಗಡಿಗಳ ಮುಂದೆ, ತಮ್ಮ ಅಂಗಡಿಯಲ್ಲಿರುವ ವಸ್ತುಗಳ ನಿಖರ ಬೆಲೆಯನ್ನು ಪ್ರಕಟಿಸಿರಬೇಕು. ಇಲ್ಲವಾದರೆ ಅಂತವರ ವಿರುದ್ಧ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.