ಹಾಸನ: ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆಗೈದು ಗೋಣಿಚೀಲದಲ್ಲಿ ಶವ ತುಂಬಿ ಕೆರೆಗೆ ಬಿಸಾಡಲು ಹೋದ ವೇಳೆ ಅದು ಸಾಧ್ಯವಾಗದೇ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ ಆರೋಪಿ ಪತಿಯನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಡಿಂಪಲ್ (28) ಕೊಲೆಯಾದ ಮಹಿಳೆ. ಆನಂದ್ ಕೊಲೆ ಆರೋಪಿ ಪತಿ. ದಂಪತಿಗೆ ಒಂದು ಮಗುವಿದೆ. ಸಂಸಾರದಲ್ಲಿ ಕಲಹ ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಪ್ರತ್ಯೇಕ ಜೀವನ ನಡೆಸುತ್ತಿದ್ದರು. ತಂದೆಯ ಜೊತೆ ಪುಟ್ಟ ಮಗು ವಾಸವಿದ್ದು, ಮಗುವನ್ನು ನೋಡಲು ಪತ್ನಿ ಬರುತ್ತಿದ್ದರು. ಆದರೆ, ಆಕೆ ಮನೆಗೆ ಬರುವುದು ಬೇಡ ಎಂದು ಎಷ್ಟು ಬಾರಿ ಹೇಳಿದರೂ ಮತ್ತೆ ಮತ್ತೆ ಬರುತ್ತಿದ್ದಳು ಎಂಬ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳವಾಡುತ್ತಿದ್ದರಂತೆ.
ಕೊನೆಗೊಂದಿನ ಆನಂದ್, ಪತ್ನಿಯೊಂದಿಗೆ ಸ್ನೇಹದ ನಾಟಕವಾಡಿ ಆಟೋದಲ್ಲಿ ಕೂರಿಸಿ ಚನ್ನರಾಯಪಟ್ಟಣ ಮಾರ್ಗವಾಗಿ ಹೋಗುವಾಗ ರಸ್ತೆ ಮಧ್ಯೆ ಆಕೆಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಮಾಡಿದ್ದ. ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ ಗುರುತು ಸಿಗದಂತೆ ಕೆರೆಗೆ ಎಸೆಯಲು ಹೋಗಿದ್ದಾನೆ. ಇದೇ ವೇಳೆ, ವಾಯುವಿಹಾರಕ್ಕೆ ಬರುತ್ತಿದ್ದ ಸಾರ್ವಜನಿಕರನ್ನು ನೋಡಿದ ಆತ ಪತ್ನಿಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.
ವಾಯುವಿಹಾರಕ್ಕೆ ಬಂದ ಸಾರ್ವಜನಿಕರು ಗೋಣಿಚೀಲದಿಂದ ಹೊರಬರುತ್ತಿದ್ದ ರಕ್ತವನ್ನು ಕಂಡು ಗಾಬರಿಯಾಗಿ ತಕ್ಷಣ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ, ಆಟೋ ಮತ್ತು ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಆರೋಪಿ ತಲೆಮರೆಸಿಕೊಳ್ಳಲು ಸಾರಿಗೆ ಬಸ್ ಮೂಲಕ ಬೆಂಗಳೂರಿನತ್ತ ಪ್ರಯಾಣ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ.
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ಹತ್ಯೆ: ಆರೋಪಿ ಬಂಧನ