ಅರಕಲಗೂಡು : ತಾಲೂಕಿನ ಪಾರಸನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
ಓದಿ: ಸಿಡಿ ಪ್ರಕರಣದಲ್ಲಿ ಯುವತಿ ಸೇರಿ ಮೂವರು ವಶಕ್ಕೆ?
ಒಂದೇ ಗ್ರಾಮದ ರಕ್ಷಿತ ಮತ್ತು ಗೋಪಾಲ್ ಎಂಬುವರು 6 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಆರು ವರ್ಷ ಕಳೆದರೂ ಮಕ್ಕಳಾಗಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಗಂಡ -ಹೆಂಡತಿ ನಡುವೆ ತುಂಬಾ ಜಗಳ ನೆಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ರಕ್ಷಿತ (24) ಕಳೆದ ಮಾರ್ಚ್ 3ರಂದು ವಿಷ ಸೇವಿಸಿದ್ದರು.
ತಕ್ಷಣ ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಕೋಮಾ ಸ್ಥಿತಿ ತಲುಪಿದ್ದ ಆಕೆಯನ್ನು ಹಾಸನದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ರಕ್ಷಿತ ಕೊನೆಯುಸಿರೆಳೆದ್ದಿದ್ದಾರೆ.
9 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೊತೆ ಇದ್ದ ಗಂಡ ಪತ್ನಿ ಮರಣ ಹೊಂದಿದ ವಿಷಯ ತಿಳಿದ ತಕ್ಷಣ ತಲೆ ಮರೆಸಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದರು. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ರಕ್ಷಿತಾಳ ಪೋಷಕರು ಆಕೆಯ ಪತಿ ಗೋಪಾಲ, ಅತ್ತೆ ಗೌರಮ್ಮ, ಮೈದುನ ವೇಕಟೇಶ್, ಜಗದೀಶ್ ಇವರುಗಳ ವಿರುದ್ದ ದೂರು ನೀಡಿದ್ದಾರೆ.
ನಮ್ಮ ಮಗಳನ್ನ ಉದ್ದೇಶ ಪೂರಕವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಆರೋಪಿಗಳ ಬಂಧನ ಆಗುವವರೆಗೂ ನಾವು ಶವ ಸಂಸ್ಕಾರ ಮಾಡುವುದಿಲ್ಲ ಎಂದು ಗೋಪಾಲನ ಮನೆ ಮುಂದೆ ಶವವಿಟ್ಟು ಪ್ರತಿಭಟಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಿ ಮೃತಳ ಪತಿ ಗೋಪಾಲನನ್ನು ಪತ್ತೆ ಹಚ್ಚಿ ಕರೆ ತಂದು ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಪತಿ ಗೋಪಾಲ್, ಅತ್ತೆ ಗೌರಮ್ಮ, ಮೈದುನರಾದ ವೆಂಕಟೇಶ್ ಮತ್ತು ಜಗದೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಾಲ್ಕು ಜನರನ್ನು ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ ಎಂದು ಪಿಎಸ್ಐ ಮಾಲಾ ಅವರು ತಿಳಿಸಿದ್ದಾರೆ.