ಹಾಸನ: ಹೇಗೆ ಯುಗಾದಿ ಹೊಸ ಸಂವತ್ಸರದ ಮೊದಲ ದಿನವೋ, ಹಾಗೇ ರೈತರಿಗೆ ಇದು ಹೊಸ ವರ್ಷದ ಬೇಸಾಯದ ಮೊದಲ ದಿನ. ಜಿಲ್ಲೆಯ ಹಳ್ಳಿಗಳಲ್ಲಿ ಯುಗಾದಿಯ ದಿನ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸುತ್ತಾರೆ. ಜಾನುವಾರು ಮೈತೊಳೆದು, ಸಿಹಿ ಅಡುಗೆ ಮಾಡಿ ಸಂಭ್ರಮಪಟ್ಟು, ಸಂಜೆಯಾಗುತ್ತಿದ್ದಂತೆಯೇ ಹೊನ್ನಾರು ಕಟ್ಟಿ ಭೂಮಿಯನ್ನ ಹದ ಮಾಡೋಕೆ ನಾಂದಿ ಹಾಡ್ತಾರೆ.
ಹೌದು.., ಚಾಂದ್ರಮಾನ ಯುಗಾದಿಯಂದು ಹೊಸ ವರುಷದ ಪ್ರಯುಕ್ತ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ರೈತರ ಪಾಲಿಗೆ ಸಡಗರದ ದಿನ. ಶೆಟ್ಟಿಹಳ್ಳಿ ಗ್ರಾಮದ ರೈತರು ಹೊನ್ನಾರು ಕಟ್ಟುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದೇ ಮಾದರಿಯಲ್ಲಿ ಹೋಬಳಿಯ ಎಲ್ಲ ಹಳ್ಳಿಗಳಲ್ಲಿಯೂ ರೈತರು ಹೊನ್ನಾರು ಕಟ್ಟುತ್ತಾರೆ.
ಗ್ರಾಮದ ದೇವಾಲಯದ ಪುರೋಹಿತರು ಹಬ್ಬದ ದಿನದಂದು ಹೊಸ ಪಂಚಾಂಗದ ಪ್ರಕಾರ ಯಾರು ಮತ್ತು ಯಾವ ಬಣ್ಣದ ಎತ್ತುಗಳಿಂದ ಹೊನ್ನಾರು ಕಟ್ಟಬೇಕು ಎಂಬುದನ್ನು ತಿಳಿಸುತ್ತಾರೆ. ಈ ಬಾರಿ ಸತ್ಯಾಳಮ್ಮ ದೇವಸ್ಥಾನದ ಬಳಿ, ರೈತ ದಯಾನಂದ ಶೆಟ್ಟಿಹಳ್ಳಿ ಎಂಬುವರು ಬಿಳಿ ಬಣ್ಣದ ಎತ್ತುಗಳಿಗೆ ನೇಗಿಲು, ನೊಗವನ್ನು ಕಟ್ಟಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉಳುಮೆ ಪ್ರಾರಂಭಿಸಿ, ಗ್ರಾಮವನ್ನು ಒಂದು ಸುತ್ತು ಹಾಕಿದರು.
ಹಾಸನ ಜಿಲ್ಲೆಯ ರೈತರು ಈ ರೀತಿ ಬೇಸಾಯ ಸಂಬಂಧಿ ಆಚರಣೆ ಸಂಪ್ರದಾಯಗಳನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಬಯಲು ಸೀಮೆ ಪ್ರದೇಶವಾದ ಅರಸೀಕೆರೆ, ಚನ್ನರಾಯಪಟ್ಟಣ ಭಾಗದ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಹೊಸ ಪಂಚಾಂಗದ ಪ್ರಕಾರ ಯುಗಾದಿ ಹಬ್ಬದಂದು ಹೊನ್ನಾರು ಉಳುಮೆ ಮೂಲಕ ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಉತ್ತಮ ಮಳೆ ಬಿದ್ದು, ಒಳ್ಳೆಯ ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಈ ಗ್ರಾಮಸ್ಥರು.