ಹಾಸನ : ಯಾವ್ನೋ ಅವ್ನು, ಹೊರಗಡೆ ಎತ್ಹಾಕ್ರೀ ಹೇಳ್ತೀನಿ.. ಎಂದು ತಾವು ಮಾತನಾಡುವಾಗ ಪದೇಪದೆ ಮಾತನಾಡುತ್ತ ತೊಂದರೆ ಕೊಡುತ್ತಿದ್ದ ವ್ಯಕ್ತಿಯ ವಿರುದ್ಧ ಶಾಸಕ ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಸಮೀಪದ ಹೆಚ್.ಆಲದಹಳ್ಳಿಯಲ್ಲಿ ನಡೆದಿದೆ.
ಆಲದಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಲು ಹೆಚ್ ಡಿ ರೇವಣ್ಣ ಆಗಮಿಸಿದ್ದರು. ಈ ವೇಳೆ ಅವರು ಮಾಧ್ಯಮದವರ ಜತೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದು ಸ್ಥಳೀಯ ವ್ಯಕ್ತಿಯೊಬ್ಬ ಹಾರ ಹಾಕಲು ಮುಂದಾಗುತ್ತಲೇ ಇದ್ದ. ಜತೆಗೆ ರೇವಣ್ಣ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಪದೇಪದೆ ರೇವಣ್ಣ ಮಾತಿಗೆ ಅಡ್ಡಿಪಡಿಸುತ್ತಿದ್ದ. ಈ ವೇಳೆ ತಾಳ್ಮೆ ಕಳೆದುಕೊಂಡ ರೇವಣ್ಣ ಆತನ ವಿರುದ್ಧ ಗರಂ ಆದರು.
ಇದಕ್ಕೆ ಪ್ರತಿಯಾಗಿ ಸ್ಥಳೀಯ ವ್ಯಕ್ತಿ ನನ್ನೇ ಎತ್ಹಾಕಿ ಅಂತೀರಾ? ಎಂದು ಮರು ಪ್ರಶ್ನೆ ಮಾಡಿದ. ಅದಕ್ಕೆ ರೇವಣ್ಣ, ನಾನು ಹಳ್ಳಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ, ಈ ವೇಳೆ ತಾಳ್ಮೆಯಿಂದ ಇರಬೇಕು ಎಂದು ಸೂಚಿಸಿದರು.
ಇದಕ್ಕೂ ಬಗ್ಗದ ಆತ ನಾನೂ ಕೂಡ ರೈತನ ಮಗ ಎಂದು ಮಧ್ಯೆ ಮಧ್ಯೆ ಮಾತಾಡುತ್ತಲೇ ಇದ್ದ. ಇದರಿಂದ ತಾಳ್ಮೆ ಕಳೆದುಕೊಂಡ ರೇವಣ್ಣ, ನೀವೇ ಎತ್ತಾಕ್ತೀರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ ಎಂದು ಪೊಲೀಸರಿಗೆ ಗದರಿಸದರು.