ಹಾಸನ: ಅರುಣಾಚಲ ಪ್ರದೇಶದಲ್ಲಿ ಕರ್ತವ್ಯನಿರತ ಹಾಸನ ಮೂಲದ ಸೈನಿಕರೊಬ್ಬರು ಮಿಲಿಟರಿ ವಾಹನದ ಮೇಲೆ ಗುಡ್ಡ ಕುಸಿದು ಸಾವಿಗೀಡಾದ ಘಟನೆ ಸಂಭವಿಸಿದೆ.
ಕಳೆದ 17 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದ ಮಲ್ಲೇಶ್ (41) ಸಾವಿಗೀಡಾದವರು. ಮಲ್ಲೇಶ್ ಅವರು ತಮ್ಮ ಸೇವಾ ಅವಧಿ ಮುಗಿದಿದ್ದರೂ ದೇಶ ಸೇವೆ ಮುಂದುವರೆಸಿದ್ದರು.
ಅರುಣಾಚಲ ಪ್ರದೇಶದ ಭಾರತ ಮತ್ತು ಚೀನಾ ಗಡಿಯ ಇಟಾನಗರ ಸಮೀಪ ಇವರನ್ನ ಹೆಚ್ಚುವರಿ ಕರ್ತವ್ಯದ ಮೇಲೆ ನಿಯೋಜನೆ ಮಾಡಲಾಗಿತ್ತು. ಯುದ್ದ ಸಾಮಾಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವ ಸಮಯದಲ್ಲಿ ಮಿಲಿಟರಿ ವಾಹನ ಮೇಲೆ ಗುಡ್ಡ ಕುಸಿದು ತೀವ್ರ ಗಾಯಗೊಂಡಿದ್ದ ಮಲ್ಲೇಶ್ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವ ಬಗ್ಗೆ ಸೇನೆಯಿಂದ ಕುಟುಂಬದವರಿಗೆ ಮಾಹಿತಿ ಲಭಿಸಿದೆ.
ಮೃತದೇಹವನ್ನು ಸೋಮವಾರ ಗ್ರಾಮಕ್ಕೆ ಕಳುಹಿಸಿ ಕೊಡುವುದಾಗಿಯೂ ತಿಳಿಸಲಾಗಿದೆ. ಪಾರ್ಥಿವ ಶರೀರವನ್ನು ಮೊದಲಿಗೆ ಹಾಸನ ಜಿಲ್ಲಾಧಿಕಾರಿಗಳ ಕಚೇರಿಗೆ ತಂದು, ಕೆಲಕಾಲ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಟ್ಟ ಬಳಿಕ ಸರ್ಕಾರಿ ಗೌರವ ಸಲ್ಲಿಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.