ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಸಮೀಪದ ನಾಗನಹಳ್ಳಿ ಗ್ರಾಮದ ಮಂಜೇಗೌಡರಿಗೆ ಗಿಡ, ಮರಗಳಂದ್ರೆ ಎಲ್ಲಿಲ್ಲದ ಪ್ರೀತಿ. ಮಕ್ಕಳನ್ನು ಹೇಗೆ ಪ್ರೀತಿಸ್ತಾರೋ ಹಾಗೆಯೇ ಗಿಡಗಳನ್ನೂ ಇವರು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಇವರು ಈವರೆಗೆ 1400ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ.
ತಮ್ಮ ಸ್ವಂತ ಹಣ ಹಾಗು ಕ್ಷೇತ್ರಾಭಿವೃದ್ಧಿಯ ಅನುದಾನದಲ್ಲಿ 5 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ 1500ಕ್ಕೂ ಹೆಚ್ಚು ಗಿಡಗಳನ್ನು ಇವರು ಬೆಳೆದಿದ್ದಾರೆ. ಮಂಜೇಗೌಡರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆದ ಕೂಡಲೇ ಸರ್ಕಾರಿ ಜಾಗಗಳನ್ನು ಹುಡುಕಿ ಅಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲು ಆರಂಭಿಸಿದ್ದಾರೆ.
ಸ್ವಗ್ರಾಮ ನಾಗನಹಳ್ಳಿ ಜನರ ಮನವೊಲಿಸಿ ಪ್ರತಿ ಮನೆಯ ಮಂದೆ ಇವರು ನೆಟ್ಟ ಗಿಡಗಳನ್ನು ಕಾಳಜಿ ಮಾಡುವಂತೆ ಜವಾಬ್ದಾರಿ ನೀಡಿದ್ದಾರೆ. ಅಲ್ಲದೇ ತಮ್ಮ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಗೆ ಸೇರುವ ಗ್ರಾಮೀಣ ರೈತರಿಗೆ ಬೇಕಾದ ಹಣ್ಣಿನ ಗಿಡಗಳನ್ನು ಬೆಳೆಸುವಂತೆ ಪ್ರೇರೇಪಿಸಿ ಪರಿಸರ ಸಂರಕ್ಷಣೆ ಮಾಡ್ತಿದ್ದಾರೆ.
ಪರಿಸರ ಪ್ರೇಮಿಯಾಗಿರೋ ಇವರು ತಮ್ಮ ಸ್ವಗ್ರಾಮವಾದ ನಾಗನಹಳ್ಳಿಯ ಸರ್ಕಾರಿ ಪಾಳು ಭೂಮಿಯಲ್ಲಿ ಈಗ ಸುಂದರ ವನವನ್ನು ನಿರ್ಮಿಸಿದ್ದಾರೆ. ಅದಕ್ಕೆ ‘ಕನಕವನ’ ಎಂದು ನಾಮಕರಣ ಮಾಡಿ ಹಿಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಂದ ಉದ್ಘಾಟನೆ ಮಾಡಿಸಿದ್ದಾರೆ.