ಹಾಸನ: ರಾಮನಾಥಪುರದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಹಾರಂಗಿ ಜಲಾಶಯದಿಂದ ನೀರು ಹೊರ ಬಿಡುಗಡೆ ಮಾಡಿರುವುದರಿಂದ ಅಲ್ಲಿನ ಸುತ್ತಮುತ್ತಲ ಗದ್ದೆಗಳು ಜಲಾವೃತವಾಗಿದೆ.
ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಜಿಲ್ಲೆಯ ಕಟ್ಟೆಪುರ ಮಾರ್ಗವಾಗಿ ರಾಮನಾಥಪುರ ಮೂಲಕ ಕೆಆರ್ಎಸ್ಗೆ ಹರಿಯುತ್ತಿದೆ. ರಾಮನಾಥಪುರದ ರಾಮೇಶ್ವರ ದೇವಾಲಯದ ಸಮೀಪವಿರುವ ಲಕ್ಷ್ಮಣೇಶ್ವರ ದೇವಾಲಯ ಮುಳುಗಿದೆ.
ದೇವಾಲಯದ ಸಮೀಪವಿರುವ 40 ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯವರು ಈಗಾಗಲೇ ತಮ್ಮ ಸಂಬಂಧಿಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಇನ್ನುಳಿದವರು ಸಂತ್ರಸ್ತರ ಆಶ್ರಯದಲ್ಲಿ ಆಶ್ರಯ ಪಡೆದಿದ್ದಾರೆ.
ಇನ್ನೂ ಎರಡು ದಿನ ಮತ್ತೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನದಿಪಾತ್ರದ ಕುಟುಂಬಗಳನ್ನು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಯಾವುದೇ ಅನಾಹುತ ಸಂಭವಿಸದಿರಲು ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.