ಹಾಸನ: ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಹಾಸನದಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾಗಿದೆ. ಭಾರತದ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಆಫ್ಘಾನಿಸ್ಥಾನ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಈ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ.
ಪೌರತ್ವ ಕಾಯ್ದೆಯ ಪ್ರಕಾರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶವಿಲ್ಲ. ಆದರೆ ಹೊಸ ತಿದ್ದುಪಡಿಯ ಮಸೂದೆಯ ಅನ್ವಯ ಇಲ್ಲಿ ಬಂದು ನೆಲೆಸಿರುವ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧರು, ಪಾರ್ಸಿ, ಕ್ರಿಶ್ಚಿಯನ್ನರು ಅನೇಕ ವರ್ಷಗಳಿಂದ ಭಾರತದಲ್ಲಿ ನೆಲಸಿದ್ದರೆ. ಈ ಕಾಯ್ದೆಯ ಪ್ರಕಾರ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
1955ರ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದ್ದು, ಪೌರತ್ವ ಕಾಯ್ದೆಯು ಕಲಂ 6(3) ಒಂದು ತಿದ್ದುಪಡಿ ಮಾಡಲಾಗಿದೆ. ಪಾಕಿಸ್ತಾನದ ಮೊದಲ ದಲಿತರಾಗಿದ್ದ ಕಾನೂನು ಸಚಿವ ಜಿನೇಂದ್ರನಾಥ್ ಮಂಡಲ್ ಸಿಂಗ್ ಪಾಕಿಸ್ತಾನದ ಸಚಿವ ಸಂಪುಟಕ್ಕೆ ನೀಡಿದ ರಾಜೀನಾಮೆ ಪತ್ರದಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಗಂಭೀರ ಸ್ವರೂಪದ ದೌರ್ಜನ್ಯವನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ವಿಫಲನಾಗಿರುವುದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.