ಹಾಸನ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಕೆಲ ಸದಸ್ಯರು, ಆರೋಗ್ಯಾಧಿಕಾರಿ ಡಾ.ಬಿ.ಎಂ.ವಿಜಯ್ ಮತ್ತು ಕೃಷಿ ಅಧಿಕಾರಿ ಅಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೇವಲ ಕೊವೀಡ್ ಪ್ರಕರಣ ಅಂತ ಹೇಳಿ ನಿಮ್ಮ ವೃತ್ತಿ ನಿಷ್ಠೆಗೆ ಯಾಕೆ ದ್ರೋಹ ಬಗೆಯುವಿರಿ. ಲಸಿಕೆ ನೀಡುವಲ್ಲಿ ಮತ್ತು ಕೊರೊನಾ ಜಾಗೃತಿ ಮೂಡಿಸುವಲ್ಲಿ ನೀವು ಎಚ್ಚರ ತಪ್ಪುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ವಿಜಯ್, ಚಿಕನ್ ಗುನ್ಯಾ ಮತ್ತು ಕ್ಷಯಾ ರೋಗವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಸರ್ಕಾರ ಕೊರೊನಾ ವ್ಯಾಕ್ಸಿನ್ ಈಗಾಗಲೇ ನೀಡಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಗರ್ಭಿಣಿಯರು, ಬಾಣಂತಿಯರು ಹಾಗೂ 18 ವರ್ಷ ಒಳಗಿನವರಿಗೆ ಲಸಿಕೆ ಹಾಕುವಂತಿಲ್ಲ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಸಾರ್ವಜನಿಕರಿಗೆ ಹಾಕಲಾಗುವುದು ಎಂದರು.
ಕೃಷಿ ಇಲಾಖೆ ಅಧಿಕಾರಿ ಅಜಯ್ ಕುಮಾರ್ ಮಾತನಾಡಿ, ಕೆಲ ತಿಂಗಳಿನಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗೆ ಯಾವ ಅನುದಾನವೂ ಕೂಡ ಬಂದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ಕೃಷಿ ಬೆಳೆಗೆ ಇನ್ನು ಪರಿಹಾರ ಕೂಡ ಬಂದಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಹಳ್ಳಿಗಳಲ್ಲಿ ಪ್ರಚಾರದ ಕೊರತೆ ಕಂಡು ಬರುತ್ತಿದೆ. ಎಲ್ಲ ಕೆಲಸ ಬಿಟ್ಟು ದೂರದ ಸ್ಥಳಗಳಿಂದ ಇಲಾಖೆಗೆ ಬಂದರೆ ಸರ್ವರ್ ಕೊರತೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಹೇಳುತ್ತೀರಿ. ಅಧಿಕಾರಿಗಳು ಉಡಾಫೆ ಉತ್ತರ ಕೊಡಬಾರದು ಎಂದರು.