ಹಾಸನ: ನಿಧಿ ಆಸೆ ತೋರಿಸಿ ದಂಪತಿಗೆ 5 ಲಕ್ಷ ರೂ. ಪಂಗನಾಮ ಹಾಕಿದ ನಕಲಿ ಸ್ವಾಮೀಜಿಯೊಬ್ಬ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಮಂಜೇಗೌಡ-ಲೀಲಾವತಿ ಹಣ ಕಳೆದುಕೊಂಡಿದ್ದಾರೆ.
ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಆರೋಪಿ ಮಂಜೇಗೌಡ ನಿಮ್ಮ ಜಮೀನಿನಲ್ಲಿ ನಿಧಿ ಇದೆ. ನನ್ನಲ್ಲಿರುವ ದೈವ ಶಕ್ತಿಯಿಂದ ಅದನ್ನು ಹೊರ ತೆಗೆಯುತ್ತೇನೆ ಎಂದು ನಂಬಿಸಿದ್ದಾನೆ. ಇದಕ್ಕೂ ಮುನ್ನ ಮಂಜೇಗೌಡರ ಹೊಲದಲ್ಲಿ ಚಿನ್ನಲೇಪಿತ ಮೂರು ಕೆಜಿ ಬೆಳ್ಳಿಯ ವಿಗ್ರಹವನ್ನು ಆತ ಹೂತಿಟ್ಟಿದ್ದ.
ಕೈ ಬೆರಳನ್ನೇ ಕೊಯ್ದ ಸ್ವಾಮೀಜಿ: ನಂತರ ರಾತ್ರಿ ವೇಳೆ ಜಮೀನಿಗೆ ಮಂಜೇಗೌಡ ಲೀಲಾವತಿ ದಂಪತಿಯನ್ನು ಕರೆದೊಯ್ದು ಮೊದಲು ಪೂಜೆ ಮಾಡಿ, ಜಮೀನಿನಲ್ಲಿ ಹೂತಿಟ್ಟಿದ್ದ ಚಿನ್ನಲೇಪಿತ ವಿಗ್ರಹ ಹೊರತೆಗೆದು ತೊಳೆದು ದಂಪತಿಗೆ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಚಿನ್ನದ ವಿಗ್ರಹಕ್ಕೆ ರಕ್ತ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದಿದ್ದ. ಬೆರಳು ಕೊಯ್ದ ರಭಸಕ್ಕೆ ಮಹಿಳೆ ಬೆರಳಿನ ನರವೇ ತುಂಡಾಗಿದೆ.
ಹಣದ ಸಮೇತ ಪರಾರಿ: ಒಂದು ವಾರದ ನಂತರ ಮಂಜೇಗೌಡ-ಲೀಲಾವತಿ ಜ್ಯೂವೆಲ್ಲರಿ ಶಾಪ್ಗೆ ತೆರಳಿ ವಿಗ್ರಹ ಪರಿಶೀಲಿಸಿದಾಗ ಬೆಳ್ಳಿ ವಿಗ್ರಹ ಎಂಬುದು ಪತ್ತೆಯಾಗಿದೆ. ಇತ್ತ ಕಳ್ಳ ಸ್ವಾಮೀಜಿ ದಂಪತಿಗೆ ವಂಚಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣದ ಸಮೇತ ಕಾಲ್ಕಿತ್ತಿದ್ದಾನೆ. ಗಾಯಗೊಂಡಿದ್ದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ. ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸ್ನೇಹಿತರೊಂದಿಗೆ ಸೇರಿ ಮನೆಗೆ ಕನ್ನ ಹಾಕಿದ ಚಾಲಕ: ಸಾರ್ವಜನಿಕರಿಂದ ಬರ್ಬರ ಹತ್ಯೆ