ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 142 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಶತಕ ಬಾರಿಸುತ್ತಿದೆ.
ಈಗಾಗಲೇ ಹಾಸನದಲ್ಲಿ ಸರ್ಕಾರಿ ಆಸ್ಪತ್ರೆ ಒಳಗೊಂಡಂತೆ ಇತರ 7 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ -19 ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಿದ್ದರೂ ಕೂಡ ಒಂದೇ ಒಂದು ವಾರದಲ್ಲಿ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಒಂದೊಂದು ಖಾಸಗಿ ಆಸ್ಪತ್ರೆಯಲ್ಲಿ ತಲಾ 100 ಹಾಸಿಗೆಗಳ ಸೌಲಭ್ಯ ಕಲ್ಪಿಸಿದರೂ ನಿತ್ಯ ನೂರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಆಸ್ಪತ್ರೆಗಳು ಈಗ ಭರ್ತಿಯಾಗುತ್ತಿವೆ. ಹೀಗಾಗಿ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ತಾಲೂಕಿನಲ್ಲಿಯೂ ಸರ್ಕಾರಿ ಆಸ್ಪತ್ರೆಗಳನ್ನ ಕೋವಿಡ್ -19 ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಿದರೂ ಸಾಕಾಗುತ್ತಿಲ್ಲ. ಪಾಸಿಟಿವ್ ಪ್ರಕರಣಗಳ ಹೊರತುಪಡಿಸಿ, ಹೊರ ರೋಗಿಗಳು ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡುವಂತಹ ಸ್ಥಿತಿ ತಲುಪಿದೆ.
ಮೊದಲು ಖಾಸಗಿ ಆಸ್ಪತ್ರೆಯಲ್ಲಿ 100 ಅಥವಾ 150ರೂ ಟೋಕನ್ ಪಡೆದು ವೈದ್ಯರನ್ನು ಭೇಟಿಮಾಡುವ ಸೌಲಭ್ಯವಿತ್ತು. ಈಗ ಪ್ರತಿ ಹೊರರೋಗಿ ಕೂಡ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಮೊದಲು ಕೋವಿಡ್ ಪರೀಕ್ಷೆ ಮಾಡಿದ ನಂತರವೇ ಕಾಯಿಲೆಗೆ ಚಿಕಿತ್ಸೆ ನೀಡುವ ಸೌಲಭ್ಯ ಇರುವುದರಿಂದ ಒಮ್ಮೆ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 3000 ರೂ. ಪಾವತಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಆಸ್ಪತ್ರೆಯ ಮೆಟ್ಟಿಲು ಹತ್ತಲು ಸಾಧ್ಯವಾಗದೇ ಮನೆಯಲ್ಲಿಯೇ ನರಳುವಂತಹ ಸ್ಥಿತಿಯಿದೆ.
ಇದಲ್ಲದೇ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯನ್ನ ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ರೋಗಿಗಳಿಗೆ ಫೀವರ್ ಕ್ಲಿನಿಕ್ ಎಂಬ ಹೆಸರಿನಡಿ ಪ್ರತ್ಯೇಕ ವಿಭಾಗವನ್ನು ತೆರೆದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೊರ ರೋಗಿಗಳ ಸಂಖ್ಯೆಯೂ ಅಧಿಕವಾಗಿರುವುದರಿಂದ ಆಸ್ಪತ್ರೆಯ ವೈದ್ಯರ, ದಾದಿಯರ ಹಾಗೂ ಸಿಬ್ಬಂದಿ ಕೊರತೆಯೂ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಾಸನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 172 ಹುದ್ದೆಗಳಿಗೆ ತಾತ್ಕಾಲಿಕವಾಗಿ ಆರು ತಿಂಗಳು ಅಥವಾ ಕೋವಿಡ್-19 ಮುಗಿಯುವ ತನಕ ಆರೋಗ್ಯ ಇಲಾಖೆ ನೇಮಕ ಮಾಡಿಕೊಳ್ಳುತ್ತಿದ್ದು, ಸಂದರ್ಶನಕ್ಕೆ ಹಾಜರಾದವರ ಸಂಖ್ಯೆ ಕೂಡ ಕಡಿಮೆ ಇತ್ತು ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಮುಂಬೈನಿಂದ ಮತ್ತು ಇತರ ರಾಜ್ಯಗಳಿಂದ ಬಂದ ಹೊರನಾಡ ಕನ್ನಡಿಗರಿಗೆ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿತ್ತು. ಹೊರರಾಜ್ಯದಿಂದ ಬರುವವರ ಸಂಖ್ಯೆ ಕಡಿಮೆಯಾದರೂ ಜಿಲ್ಲೆಯಲ್ಲಿ ನಿತ್ಯ ನೂರಕ್ಕೂ ಅಧಿಕ ಪಾಸಿಟಿವ್ ಸಂಖ್ಯೆಗಳು ಕಂಡುಬರುತ್ತಿರುವುದು ಸಮುದಾಯಕ್ಕೆ ಹರಡಿರುವ ಸಾಧ್ಯತೆಯನ್ನು ಸ್ಪಷ್ಟಪಡಿಸುತ್ತದೆ.