ಅರಕಲಗೂಡು: ತಾಲೂಕಿನಲ್ಲಿ ಕೊರೊನಾ ಭೀತಿ ಒಂದೆಡೆಯಾದರೆ, ಒಂದೆಡೆ ದಾರಿಕೊಂಗಳಲೆ ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರು ಬಂದರು, ಚರಂಡಿ ನೀರು ಮಿಶ್ರಿತಗೊಂಡು ಬರುತ್ತಿದೆ. ಇದರಿಂದ ಈ ಗ್ರಾಮದಲ್ಲಿ ಅನಾರೋಗ್ಯ ಸಮಸ್ಯೆ ಎದುರಾಗಿದ್ದು, ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ವಿಜಾಪುರ ಫಾರೆಸ್ಟ್ ಗ್ರಾಮ ಪಂಚಾಯತ್ಗೆ ಸೇರಿದ ದಾರಿಕೊಂಗಳಲೆ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ನೀರನ್ನು ಸೇವಿಸುತ್ತಿರುವ ನಿವಾಸಿಗಳಿಗೆ ನೆಗಡಿ, ಕೆಮ್ಮು, ಜ್ವರ, ಬರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಅದೆ ನೀರನ್ನು ಕುಡಿಯುವ ದುಸ್ಥಿತಿ ನಮ್ಮದಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಹಾಕಿಸಿಕೊಂಡ ಕಮಲ್ ಹಾಸನ್.. ನಾಳೆಯಿಂದ ಪ್ರಚಾರದಲ್ಲಿ ಭಾಗಿ
ಕುಡಿಯುವ ನೀರು ಸರಬರಾಜಿಗೆ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಪೈಪ್ಲೈನ್ ಅಳವಡಿಸಲಾಗಿದ್ದು, ಭೂಮಿಯ ಒಳಗೆ ಅಳವಡಿಸಬೇಕಾದ ಪೈಪ್ಗಳನ್ನು ರಸ್ತೆಯ ಬದಿಗಿರುವ ಮೋರಿಯಲ್ಲಿ ಅಳವಡಿಸಿದ್ದರಿಂದ, ಅವು ಒಡೆದು ಹೋಗಿವೆಯಂತೆ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರಿಗೆ ಶುದ್ಧ ನೀರನ್ನು ಒದಗಿಸಿ ಆತಂಕವನ್ನು ದೂರ ಮಾಡಬೇಕಿದೆ.