ಹಾಸನ : ಬಿತ್ತನೆ ಆಲೂಗಡ್ಡೆ ದರವನ್ನು ಕಡಿಮೆ ಮಾಡಿ ಜಿಲ್ಲಾಡಳಿತದಿಂದ ಉಚಿತವಾಗಿ ಔಷಧಿ ಮತ್ತು ರಸಗೊಬ್ಬರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊರೊನಾ ಮಹಾಮಾರಿಯಿಂದ ಈ ಹಿಂದೆ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಭೂಮಿಯಲ್ಲೇ ಕೊಳೆಯುವತಾಯಿತು. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿರುವಾಗಲೇ ಬಿತ್ತನೆ ಆಲೂಗಡ್ಡೆ ಕ್ವಿಂಟಲ್‌ಗೆ ₹2250 ನಿಗದಿ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಜಿಲ್ಲಾಡಳಿತವು ಸಮಂಜಸವಾದ ದರ ನಿಗದಿಪಡಿಸಿ ಉಚಿತ ಔಷಧಿ ಮತ್ತು ರಸಗೊಬ್ಬರ ಕೊಡುವುದರ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಕಳೆದ 14 ವರ್ಷಗಳಿಂದ ಬೆಳೆ ವಿಮೆ ಕಟ್ಟಿಸಿಕೊಂಡು ವಿಮೆಯ ಹಣವನ್ನು ಈವರೆಗೂ ನೀಡಿರುವುದಿಲ್ಲ ಎಂದು ದೂರಿದ ಪ್ರತಿಭಟನಾಕಾರರು, ಗ್ರಾಮಾಂತರ ಪ್ರದೇಶ ತೋಟದ ಒಂಟಿ ಮನೆಗಳಿಗೆ ನಿರಂತರ ವಿದ್ಯುತ್ ಜ್ಯೋತಿ ಸಂಪರ್ಕ ಇರುವುದಿಲ್ಲ. ನೀರಾವರಿಗೆ ಬಳಸುವ ವಿದ್ಯುತ್ ಸಂಪರ್ಕ ಮಾತ್ರವೇ ಇದ್ದು, ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಿಯಾಗಿ ಇರುವುದಿಲ್ಲ. ತಕ್ಷಣ ಗಮನ ನೀಡಿ ಸಿಂಗಲ್ ಫೇಸ್ ಮಾಡಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಲಾಯಿತು.