ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಇದೇ ತಿಂಗಳ 28 ರಿಂದ ನವೆಂಬರ್ 5ರ ತನಕ ಜರುಗಲಿದ್ದು ಈ ಬಾರಿಯೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.
ಹಾಸನಾಂಬೆ ಅಂದ್ರೆ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನ ನೀಡುವ ಮೂಲಕ ಮನೆಮಾತಾಗಿರುವ ಶಕ್ತಿದೇವತೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡುವ ಮೂಲಕ ಮಹೋತ್ಸವವನ್ನು ಜಿಲ್ಲಾಡಳಿತ ಸರಳವಾಗಿ ಆಚರಣೆ ಮಾಡಿಕೊಂಡು ಬಂದಿದೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ನಡೆಸಿ, ಈ ಬಾರಿ ಸಹ ಸಾರ್ವಜನಿಕರಿಗೆ ಅವಕಾಶ ನೀಡದಿರುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇವಲ ಎಲ್.ಇ.ಡಿ ಪರದೆಯ ಮೂಲಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರವನ್ನು ಮುನ್ನೆಲೆಗೆ ತಂದಿರುವ ಕಾಂಗ್ರೆಸ್ ಮುಖಂಡರು, ನೇರ ದರ್ಶನ ಕೊಡುವುದಾದರೆ ಸಮಾನವಾಗಿ ಸಾರ್ವಜನಿಕರಿಗೂ ಕೊಡಬೇಕು. ಇದರ ಹೊರತಾಗಿ ರಾಜಕೀಯ ಮುಖಂಡರು ಅಥವಾ ಇನ್ಯಾವುದೇ ಅವರ ಹಿಂಬಾಲಕರಿಗೆ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಬನವಾಸಿ ರಂಗಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಪತ್ರ ನೀಡಿದರು.