ಹಾಸನ: ಜು.26ಕ್ಕೆ ಯಡಿಯೂರಪ್ಪ ಬದಲಾವಣೆ ಆಡಿಯೋ ವಿಚಾರ ಅದು ಅವರ ಪಾರ್ಟಿಗೆ ಬಿಟ್ಟದ್ದು. ನನ್ನನ್ನ ಯಾರು ಇಲ್ಲಿಯತನಕ ಭೇಟಿ ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಹೊಳೆನರಸೀಪುರದ ಶಾಸಕ ಅಷ್ಟೇ. ನನಗೆ ಇಲ್ಲಿಗೆ ಬಂದು ಯಾರು ಕೊರವಂಜಿ ಶಾಸ್ತ್ರ ಹೇಳುವುದಿಲ್ಲ. ಈಗಾಗಲೇ ಪಕ್ಷದ ಇಬ್ಬರಿಗೆ ಕೊರವಂಜಿ ಅವರು ಶಾಸ್ತ್ರ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಏನೇನು ಬದಲಾವಣೆಯಾಗುತ್ತದೆಯೋ ನೋಡೋಣ ಎಂದರು.
ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಅವರಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವರು ಟೆಕ್ನಿಕಲ್ ಸೌಂಡ್ ಇರುವ ಶಾಸಕರು. ನಮ್ಮ ಸರ್ಕಾರ ಏನು ಮಾಡಿದೆ ಅಂತ ನಾನು ಹೇಳಬೇಕಿಲ್ಲ. ಯಾಕೆಂದರೆ ಅದು ಜನರಿಗೆ ಗೊತ್ತು. 10 ವರ್ಷಗಳಿಂದ ಮೆಡಿಕಲ್ ಕಾಲೇಜು ಹಾಳು ಬಿದ್ದಿದ್ದು, ಅದನ್ನ ಸರಿ ಮಾಡಿದವರು ಯಾರು?. ಪಶು ಆಸ್ಪತ್ರೆ, ಕೃಷಿ ಕಾಲೇಜು, ಹೊಸ ಬಸ್ ನಿಲ್ದಾಣ ಹಾಸನ ರೈಲ್ವೆ ನಿಲ್ದಾಣ ಕೊಡುಗೆ ಯಾರದ್ದು? ಎಂಬುದು ಜನಕ್ಕೆ ಗೊತ್ತಿದೆ. ಬೆಂಗಳೂರು-ಹಾಸನ ಚತುಷ್ಪಥದ ರಸ್ತೆ ಯಾರು ಮಾಡಿಸಿದ್ದು ಅಂತ ಎಲ್ಲರಿಗೂ ಗೊತ್ತಿಲ್ವ?. ನಮ್ಮ ಪಕ್ಷ ಏನೇನೋ ಮಾಡಿದೆ ಎಂದು ಸಮಯ ಬಂದಾಗ ಹೇಳುತ್ತೇನೆ ಎಂದರು.
ಚನ್ನರಾಯಪಟ್ಟಣದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಬೊಬ್ಬಿರಿಯುತ್ತಿದ್ದ ಮಾಜಿ ಶಾಸಕ ಪುಟ್ಟೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ರೇವಣ್ಣ, ಪುಟ್ಟೇಗೌಡರು ಬಹಳ ಹಿರಿಯ ರಾಜಕಾರಣಿ. ಅವರಿಗೆ ಸಾಕಷ್ಟು ಅನುಭವ ಇದೆ. ಅವರು ಹಿರೀಸಾವೆ ಗಡಿಯಲ್ಲಾದ್ರೂ ಬಾವುಟ ಹಾರಿಸಲಿ, ಇಲ್ಲವೇ ಮಂಗಳೂರಿನ ಮಲ್ಪೆ ಬೀಚಿನ ಮೇಲಾದರೂ ಹಾರಿಸಲಿ. ನಮ್ಮ ಜಿಲ್ಲೆಯ ಜನಕ್ಕೆ ನಮ್ಮ ಪಕ್ಷ ಏನು ಮಾಡಿದೆ ಅಂತ ಗೊತ್ತಿದೆ. ಹಾಗಾಗಿ ನಮ್ಮ ಜಿಲ್ಲೆಯಲ್ಲಿ ಜನರು ಮತ್ತು ದೇವರು ನನ್ನ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ 150 ಕಾಂಗ್ರೆಸ್ 130 ಸ್ಥಾನ ಗೆಲ್ಲುತ್ತೇವೆ ಎಂದು ಹೋರಾಟ ನಡೆಸುತ್ತಿದ್ದಾರೆ. ಇರೋದೇ 224 ಸ್ಥಾನ. ಎಲ್ಲವನ್ನ ಇವರೇ ಗೆದ್ದರೆ ನಾವೇನು ಗೆಲ್ಲುವುದು ಎಂದು ರೇವಣ್ಣ ವ್ಯಂಗ್ಯವಾಡಿದರು.