ಬೆಂಗಳೂರು: ಕೃಷಿ ಸಾಲ ಮತ್ತಿತರ ಸಾಲ ವಿತರಣೆಯಲ್ಲಿ 12.63 ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಬ್ಯಾಂಕ್‌ನ ಇಬ್ಬರು ಮಾಜಿ ಶಾಖಾ ವ್ಯವಸ್ಥಾಪಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಸೇರಿದಂತೆ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಜೆ ವಿಧಿಸಿದೆ. ಆರೋಪಿಗಳಿಗೆ 1ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಒಟ್ಟು 52 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
12.63 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸಿಂಡಿಕೇಟ್ ಬ್ಯಾಂಕ್‌ನ ಮಂಡ್ಯ ಶಾಖೆಯ ವ್ಯವಸ್ಥಾಪಕರಾಗಿದ್ದ ಹೆಚ್.ಎಂ.ಸ್ವಾಮಿ, ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾಗಿದ್ದ ವಿಠ್ಠಲ್ ದಾಸ್ ಮತ್ತು ಖಾಸಗಿ ವ್ಯಕ್ತಿ ಅಸಾದುಲ್ಲಾ ಖಾನ್ ಎಂಬವರಿಗೆ 1 ರಿಂದ 3 ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 52 ಲಕ್ಷ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಈ ಪೈಕಿ ಹೆಚ್.ಎಂ.ಸ್ವಾಮಿಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 1.5 ಲಕ್ಷ ರೂ. ದಂಡ, ವಿಠಲ್ ದಾಸ್‌ಗೆ 1 ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ಹಾಗೂ ಅಸಾದುಲ್ಲಾ ಖಾನ್‌ಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.50 ಲಕ್ಷ ದಂಡ ವಿಧಿಸಲಾಗಿದೆ.
ಇವರು ಜೈ ಕಿಸಾನ್ ಸಾಲ ಮತ್ತು ಇತರ ಸಾಲ ಸೌಲಭ್ಯಗಳಡಿಯಲ್ಲಿ ಸಾಲ ಮಂಜೂರಾತಿ ಮತ್ತು ವಿತರಣೆಯಲ್ಲಿ ಅಕ್ರಮ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ತಮ್ಮಲ್ಲೇ ಪಿತೂರಿ ಮಾಡಿ ಬ್ಯಾಂಕ್‌ಗೆ ಸಾಕಷ್ಟು ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದೂ ಸಹ ಆರೋಪಿಸಿ ಬ್ಯಾಂಕ್‌ನ ಮುಖ್ಯ ವಿಚಕ್ಷಣ ಅಧಿಕಾರಿ ನೀಡಿದ ಲಿಖಿತ ದೂರಿನ ಮೇರೆಗೆ ಏಪ್ರಿಲ್ 15, 2009ರಂದು ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
2020ರ ಏಪ್ರಿಲ್ 1ರಂದು ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜೊತೆ ಕೇಂದ್ರ ಸರ್ಕಾರ ವಿಲೀನಗೊಳಿಸಿದೆ.
ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರಗೈದು ಗರ್ಭಪಾತ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, ₹50 ಸಾವಿರ ದಂಡ