ಆಹಾರ ಪದ್ಧತಿಯಲ್ಲಿ ಮಾತ್ರವಲ್ಲ, ಬ್ಯೂಟಿಕೇರ್ ಕ್ಷೇತ್ರದಲ್ಲೂ ವೀಗನ್ ಪದ್ಧತಿ ಕಾಲಿಟ್ಟಿದೆ. ವೀಗನ್ ಸ್ಕಿನ್ಕೇರ್ ಎನ್ನುವುದು ಟ್ರೆಂಡ್ ಆಗಿ ಮಾತ್ರವಲ್ಲ, ಇದು ಸೌಂದರ್ಯ ವೃದ್ಧಿ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ಚಿಂತನಾಶೀಲ ವಿಧಾನವಾಗಿಯೂ ಮಾರ್ಪಟ್ಟಿದೆ. ನೀವು ಈ ವೀಗನ್ ಸ್ಕಿನ್ ಕೇರ್ ವಿಧಾನವನ್ನು ಆಯ್ಕೆ ಮಾಡಿಕೊಂಡಲ್ಲಿ, ಪ್ರಾಣಿ ಮೂಲದ ಪದಾರ್ಥಗಳಿಂದ ಮುಕ್ತವಾದ ಹಾಗೂ ಕ್ರೌರ್ಯ- ಮುಕ್ತ ಉತ್ಪನ್ನಗಳಿಂದ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ನೀವು ಈಗಾಗಲೇ ವೀಗನ್ ಪದ್ಧತಿಯನ್ನು ಅನುಸರಿಸುತ್ತಿದ್ದರೆ ಅಥವಾ ಇನ್ನಷ್ಟೇ ವೀಗನ್ ಪದ್ಧತಿಯನ್ನು ಅಳವಡಿಸಿಕೊಂಡರೂ ಸರಿ, ಸಸ್ಯ ಆಧಾರಿತ ಸ್ಕಿನ್ ಕೇರ್ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮಾತ್ರವಲ್ಲ ಈ ಮೂಲಕ ನೀವು ಈ ಭೂಮಿ ಹಾಗೂ ಅದರ ಮೇಲಿನ ಜೀವರಾಶಿಗಳ ಮೇಲೆ ದಯೆ ತೋರಿಸಿದಂತಾಗುತ್ತದೆ. ನಿಮ್ಮ ಸೌಂದರ್ಯ ಕಾಪಾಡಿಕೊಳ್ಳುವ ವಿಧಾನಗಳನ್ನು ರಿಫ್ರೆಶ್ ಮಾಡಲು ಸಿದ್ಧರಿದ್ದೀರಾ? ಹಾಗಾದರೆ, ಬ್ರಿಲೇರ್ನ ಸುಪ್ರಿಯಾ ಜಿಂದಾಲ್ ಅವರು ವೀಗನ್ ಸ್ಕಿನ್ಕೇರ್ ಬಗ್ಗೆ ವಿವರಿಸಿರುವ ನಾಲ್ಕು ಅಗತ್ಯ ಹಂತಗಳು ಇಲ್ಲಿವೆ.

ವೀಗನ್ ಸ್ಕಿನ್ ಕೇರ್ ಪದ್ಧತಿ, ಪ್ರಾಣಿ ಮೂಲದ ವಸ್ತುಗಳಿಂದ ಮುಕ್ತವಾಗಿದ್ದು, ಸಸ್ಯ ಆಧಾರಿತ ಪದಾರ್ಥಗಳ ಬಗ್ಗೆ ಕೇಂದ್ರೀಕೃತವಾಗಿದೆ. ಈ ಸಸ್ಯಮೂಲ ಸೌಂದರ್ಯವರ್ಧಕಗಳು ಭಾರತೀಯ ತ್ವಚೆಗೆ ಸಂಪೂರ್ಣ ಸೂಕ್ತವಾಗಿದೆ ಎನ್ನುತ್ತಾರೆ ಸುಪ್ರಿಯಾ ಜಿಂದಾಲ್.
ಮೊದಲ ಹಂತ: ನಿಮ್ಮ ಸ್ಕಿನ್ ಕೇರ್ ಅನ್ನು ನಯವಾದ ಹೈಡ್ರೇಟಿಂಗ್ ಕ್ಲೆನ್ಸರ್ನಿಂದ ಫೇಸ್ ಸ್ಕ್ರಬ್ ಮಾಡುವ ಮೂಲಕ ಪ್ರಾರಂಭಿಸಿ. ಗುಲಾಬಿ ಅಥವಾ ತೆಂಗಿನಕಾಯಿ ಆಧಾರಿತ ಹೈಡ್ರೇಟಿಂಗ್ ಕ್ಲೆನ್ಸರ್ಗಳು ಉತ್ತಮವಾಗಿರುತ್ತವೆ. ಮುಖ ಸ್ಕ್ರಬ್ ಮಾಡಲು ದೊಡ್ಡ ಕಣಗಳಿರುವ ಸ್ಕ್ರಬ್ ಬದಲು ಸಣ್ಣ ಕಣಗಳಿರುವ ಹಾಗೂ ನಯವಾದ ಸ್ಕ್ರಬ್ ಆಯ್ಕೆ ಮಾಡಿಕೊಳ್ಳಿ.

ಎರಡನೇ ಹಂತ: ಪೋಷಣೆಯುಕ್ತ ಸಿರಮ್ ಅನ್ನು ಹಚ್ಚುವ ಮೂಲಕ ತ್ವಚೆಯ ಮೇಲಿನ ಲಿಪಿಡ್ ತಡೆಗೋಡೆಯನ್ನು ರಕ್ಷಿಸಿಕೊಳ್ಳಬಹುದು. ಸಿರಮ್ನಲ್ಲಿರುವ ವಿಟಮಿನ್ ಸಿ ಶಕ್ತಿಯುತ ತ್ವಚೆ ಹಾಗೂ ತ್ವಚೆಯ ಹೈಡ್ರೇಶನ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಅದರಲ್ಲಿರುವ ಪ್ರೋಬಯಾಟಿಕ್ಗಳು ಚರ್ಮದ ನೈಸರ್ಗಿಕ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮೂರನೇ ಹಂತ: ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಮಾಯಿಶ್ಚರೈಸರ್ನಲ್ಲಿರುವ ಹೈಲುರಾನಿಕ್ ಆಮ್ಲ ಒಣ ಚರ್ಮಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಾಂಬಿನೇಷನ್ ಚರ್ಮಕ್ಕೆ ವಿಟಮಿನ್ ಸಿ ಸೂಕ್ತ. ಮಾಯಿಶ್ಚರೈಸರ್ಗಳ ಪರಿಣಾಮಕಾರಿಕತ್ವವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಬಾರಿ ಉತ್ಪನ್ನದ, ಬಳಸಿದ ವಸ್ತುಗಳ ವಿವರಗಳಿರುವ ಲೇಬಲ್ ಅನ್ನು ಪರಿಶೀಲಿಸಲು ಮರೆಯದಿರಿ.

ನಾಲ್ಕನೇ ಹಂತ: ತ್ವಚೆಗೆ ಸನ್ಸ್ಕ್ರೀನ್ ಹಚ್ಚುವುದು ಅತ್ಯಗತ್ಯ. ಮುಖ್ಯವಾಗಿ ಝಿಂಕ್ ಆಕ್ಸೈಡ್ ಇರುವಂತಹ ಖನಿಜ ಆಧಾರಿತ ಸನ್ಸ್ಕ್ರೀನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ಅಂತಹವುಗಳು ತ್ವಚೆಯ ಮೇಲೆ ಉಳಿಯುತ್ತದೆ. ಮತ್ತು ತ್ವಚೆಯ ರಕ್ತಪ್ರವಾಹವಾಗುವ ಜಾಗಕ್ಕೆ ಹೀರಿಕೊಳ್ಳುವುದಿಲ್ಲ.
ಇದನ್ನೂ ಓದಿ: ಈ ರೂಲ್ಸ್ ಪ್ರಕಾರ ವಾಕಿಂಗ್ ಮಾಡಿದರೆ ಹೃದಯದ ಸಮಸ್ಯೆಗಳು ದೂರ: ಸಂಶೋಧನೆ