ಸಕಲೇಶಪುರ : ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ. ತಾಪಂನಲ್ಲಿ ಜೆಡಿಎಸ್ 5, ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ನ ನಾಲ್ವರು ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿದ್ದರು.
ಹಾನುಬಾಳ್ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಅನುಷಾ ಹಾಗೂ ಕ್ಯಾಮನಹಳ್ಳಿ ಕ್ಷೇತ್ರದ ಸದಸ್ಯ ಸಿಮೆಂಟ್ ಮಂಜು ಅವಿಶ್ವಾಸಕ್ಕೆ ಸಹಿ ಹಾಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು 8 ಜನ ಸದಸ್ಯರು ಹಾಜರಾಗಿ ನಿರ್ಣಯದ ಪರ ಮತ ಚಲಾಯಿಸಬೇಕಿತ್ತು. ಆದರೆ, ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಐಗೂರು ಕ್ಷೇತ್ರದ ಶಿವಪ್ಪ ಗೈರು ಹಾಜರಾಗಿದ್ದು, ನಿರ್ಣಯದ ಪರ ಕಾಂಗ್ರೆಸ್‌ನ ಯಡೆಹಳ್ಳಿ ಮಂಜುನಾಥ್, ಉದಯ್, ಕೃಷ್ಣೇಗೌಡ,ಶಿವಮ್ಮ, ಜೆಡಿಎಸ್‌ನ ಚಂದ್ರಮತಿ, ಚೈತ್ರಾ, ರುಕ್ಮಿಣಿ ಮಲ್ಲೇಶ್ ಮತದಾನ ಮಾಡಿದ್ದು ಕೇವಲ 7 ಮತಗಳು ಬಿದ್ದಿದ್ದರಿಂದ ಅವಿಶ್ವಾಸ ನಿರ್ಣಯಕ್ಕೆ ಹಿನ್ನಡೆಯಾಯಿತು.
ತಾಲೂಕು ಪಂಚಾಯತ್ ಸದಸ್ಯ ಕಾಂಗ್ರೆಸ್‌ನ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೆವು. ಅದಕ್ಕೆ ಇಂದು ಸೋಲಾಗಿದೆ. ಇದರಿಂದ ನಾವು ಧೃತಿಗೆಡುವುದಿಲ್ಲ. ಭಾರತೀಯ ಜನತಾ ಪಾರ್ಟಿಯು ಸದಸ್ಯರನ್ನು ಹೊತ್ತುಕೊಂಡು ಹೋಗಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿರುವುದನ್ನು ಈ ರಾಜ್ಯವು ಕಂಡಿದೆ. ಅದೇ ರೀತಿ ಸಕಲೇಶಪುರದಲ್ಲೂ ಮರುಕಳಿಸಿದೆ ಎಂದರು.
ತಾಲೂಕು ಭಾಜಪ ಅಧ್ಯಕ್ಷ ಮಂಜುನಾಥ್ ಸಂಘಿ ಮಾತನಾಡಿ, ಅಧ್ಯಕ್ಷೆ ಶ್ವೇತ ಪ್ರಸನ್ನರವರು ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿ ಆಯ್ಕೆಯಾಗಿ ನಂತರ ರಾಜಕೀಯ ಮೇಲಾಟದಲ್ಲಿ ಕಾಂಗ್ರೆಸ್ ಪಕ್ಷದವರು ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕೆಂದು ನಮ್ಮ ಪಕ್ಷದ ಸದಸ್ಯರಿಗೆ 5 ವರ್ಷಗಳ ಅಧ್ಯಕ್ಷರಾಗಿರಲು ಅಧಿಕಾರ ನೀಡಿದ್ದರು. ತದನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ದೂರ ಇಟ್ಟಿದ್ದ ಕಾಂಗ್ರೆಸ್‌ನವರೇ ಅವರ ಸಹಾಯದಿಂದಲೇ ಅಧ್ಯಕ್ಷರನ್ನು ಕೆಳಗಿಳಿಸಲು ಅನೈತಿಕ ಮೈತ್ರಿ ಮಾಡಿಕೊಂಡು ಪ್ರಯತ್ನ ನೆಡೆಸಿದ್ದರು. ಆದರೆ, ಅವರುಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಬಿದ್ದು ಹೋಗಿದ್ದು ಇದರಿಂದ ಬಿಜೆಪಿಯು ಯಾವತ್ತೂ ಸತ್ಯದ ಪರವಾಗಿರುತ್ತದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ಬಿಜೆಪಿಯನ್ನು ತಾ.ಪಂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಹಾಸನದ ಶಾಸಕರಾದ ಪ್ರೀತಮ್ ಗೌಡ ತೆರೆಮೆರೆಯ ಹಿಂದೆ ತಂತ್ರಗಾರಿಕೆ ರೂಪಿಸಿದ್ದರೆಂದು ತಿಳಿದು ಬಂದಿದೆ.