ಹಾಸನ: ಕೊರೊನಾ ಸೋಂಕು ತಡೆಗೆ ಬಿಜೆಪಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡದ ಅವರು, ಯಡಿಯೂರಪ್ಪರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿವೆ. ಬಡವರು ಮತ್ತು ಹಿಂದುಳಿದ ವರ್ಗಗಳ ಪರ ಘೋಷಣೆ ಮಾಡಿದ, ಕೋಟಿಗಟ್ಟಲೇ ಪರಿಹಾರದ ಹಣ ಬಡವರಿಗೆ, ದೀನ ದಲಿತರಿಗೆ ಮತ್ತು ಹಿಂದುಳಿದವರಿಗೆ ಈವರೆಗೆ ತಲುಪಿಲ್ಲವೆಂದು ದೂರಿದರು.
ಕರ್ನಾಟಕ ಭೂ-ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ, ರೈತರಿಗೆ ಅನ್ಯಾಯ ಮಾಡಲಾಗಿದೆ. ಈಗಾಗಲೇ ಕೃಷಿ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಮಾಡಿದ ಬೆನ್ನಲ್ಲೇ ಇದನ್ನೂ ತಿದ್ದುಪಡಿ ಮಾಡಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳ್ಳವರ ಪರ: ಸಾಲ ಮನ್ನಾ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಸರಬರಾಜು, ಉತ್ತಮ ಗುಣಮಟ್ಟದ ಬೀಜ ವಿತರಣೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಇದ್ಯಾವುದನ್ನು ಮಾಡದೇ ಬಿಜೆಪಿ ಸರ್ಕಾರವು ಒಂದರ ಮೇಲೊಂದು ತಪ್ಪುಗಳನ್ನು ಮಾಡುವ ಮೂಲಕ ರೈತರನ್ನು ಕಂಗಾಲಾಗಿಸಿದೆ ಎಂದು ಎಂದರು.
ಹಾಸನ ಜಿಲ್ಲೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಬೆಳೆ ಹಾಳಾಗಿ ರೈತರಿಗೆ ನಷ್ಟ ಉಂಟಾಗಿದ್ದು, ಇದರ ಜೊತೆಗೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಧಿಕ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಹಾಸನ ತಾಲೂಕಿನ ಪ್ರತಿ ರೈತನ ಜೋಳದ ಬೆಳೆ ಕೂಡ ಸಂಪೂರ್ಣವಾಗಿ ನೆಲ ಕಚ್ಚಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು, ಬೆಳೆ ನಷ್ಟವನ್ನು ಗಣನೆಗೆ ತೆಗೆದುಕೊಂಡು ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.