ಹಾಸನ: ಬೆಂಗಳೂರು-ಮಂಗಳೂರು ನಡುವಿನ ರೈಲ್ವೇ ಹಳಿ ಮೇಲೆ ಕುಸಿದು ಬಿದ್ದಿದ್ದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು ನಾಳೆಯಿಂದ ರೈಲು ಸಂಚಾರ ಪುನಾರಂಭವಾಗುವ ನಿರೀಕ್ಷೆಯಿದೆ.
2 ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿದ ರೈಲ್ವೇ ಸಿಬ್ಬಂದಿ, 6 ಹಿಟಾಚಿಗಳನ್ನು ಬಳಸಿಕೊಂಡು ಹಳಿ ಮೇಲೆ ಬಿದ್ದಿದ್ದ ಮಣ್ಣು ಮತ್ತು ಬಂಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳೆಯ ಕಾರಣ ಪದೇ ಪದೇ ಹಳಿಗಳ ಮೇಲೆ ಮಣ್ಣು ಕುಸಿಯುತ್ತಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು. ಆದ್ದರಿಂದ ಮೊದಲು ಹಳಿ ಮೇಲೆ ಬಿದ್ದಿದ್ದ ಬಂಡೆ ಸುತ್ತಲಿನ ಮಣ್ಣು ತೆರೆವುಗೊಳಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಸಿಬ್ಬಂದಿ ಮಾಡಿದ್ದರು. ಇಂದು ಮಧ್ಯಾಹ್ನ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು, ನಾಳೆಯಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ.