ಹಾಸನ: ಎಲ್ಲರ ನಿದ್ದೆಗೆಡೆಸಿರುವ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ಪೊಲೀಸ್ ಇಲಾಖೆಯು ಹಾಂಸನಾಂಬ ಪಡೆ ಹೆಸರಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಯಾರಾದರೂ ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಕೆಂಪು ಟೀ ಶರ್ಟ್ ಧರಿಸಿರುವ ಪೊಲೀಸ್ ಸಿಬ್ಬಂದಿ ಹಾಸನ ನಗರದ ಸುತ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ. ದಾರಿಯಲ್ಲಿ ಯಾರಾದರೂ ಓಡಾಡುವುದು ಮತ್ತು ವಾಹನದಲ್ಲಿ ಸಂಚರಿಸುವುದು ಕಂಡು ಬಂದರೆ ಅವರನ್ನು ಬಂಧಿಸಲಾಗುತ್ತದೆ. ಎಫ್ಐಆರ್ ದಾಖಲಿಸುವುದು ಖಚಿತ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜನರಿಗೆ ಮಾಹಿತಿ ನೀಡಲು ಹಾಸನಾಂಬ ಪಡೆ ತರಲಾಗಿದೆ. ಇದರಲ್ಲಿ ಎಲ್ಲಾ ಪೊಲೀಸ್ ಠಾಣೆಯ ಮಹಿಳಾ ಮತ್ತು ಪುರುಷ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಮನೆಯಿಂದ ಹೊರಗೆ ಬಾರದಂತೆ ಈ ತಂಡ ನಿಗಾ ವಹಿಸಲಿದೆ. ಅಗತ್ಯ ವಸ್ತುಗಳನ್ನು ಖರೀದಿ ಮಾಡುವಾಗ ಸಾಮಾಜಿಕ ಅಂತರ ಪಾಲಿಸಬೇಕು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಬೇರೆ ವಸ್ತ್ರವನ್ನು ಹಾಕಿರುತ್ತಾರೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.