ಹಾಸನ: ಶ್ರೀ ಕ್ಷೇತ್ರ ದಕ್ಷಿಣ ಜೈನ ಕಾಶಿ ಶ್ರವಣಬೆಳಗೊಳ ಜೈನ ಮಠಕ್ಕೆ ಚಿರತೆಯೊಂದು ಬಂದು ಹೋಗಿರುವ ಘಟನೆ ತಡವಾಗಿ ಬಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.
ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಆಹಾರ ಹುಡುಕಿಕೊಂಡು ದೊಡ್ಡಬೆಟ್ಟದ ಕಡೆಯಿಂದ ಶ್ರೀ ಮಠಕ್ಕೆ ಕಾಲು ದಾರಿಯಲ್ಲಿ ಆಗಮಿಸಿ, ಶ್ರೀ ಮಠದ ಅಡುಗೆ ಮನೆ ಎದುರಿಗಿರುವ ಹೊರಾಂಗಣಕ್ಕೆ ಬಂದು ಸ್ವಲ್ಪ ಸಮಯ ಅಕ್ಕಪಕ್ಕದಲ್ಲಿ ಸುತ್ತಾಡಿ ಬಳಿಕ ಅಡುಗೆ ಮನೆಯ ನೆಲಮಹಡಿ ಒಳಗೆ ಹೋಗಿದೆ.
ನೆಲ ಮಹಡಿಯಲ್ಲಿಯೂ ಏನೂ ಸಿಗದ ಹಿನ್ನೆಲೆಯಲ್ಲಿ ತಡರಾತ್ರಿಯತನಕ ಜೈನ ಮಠದಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳ ಶಬ್ದದಿಂದ ಹೆದರಿ ಅಲ್ಲಿಂದ ಹೊರಬಂದಿದೆ. ಇನ್ನು ಅಡುಗೆ ಮನೆಯ ಪಕ್ಕದಲ್ಲಿಯೇ ಶ್ರೀಮಠದ ವಿದ್ಯಾ ಸಂಸ್ಥೆ ಇದ್ದು, ಮಕ್ಕಳು ಆಟವಾಡುವ ಜಾಗದಲ್ಲಿಯೂ ಓಡಾಡಿ ನಂತರ ಪಕ್ಕದ ಚರಂಡಿಯ ಮೂಲಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಂಡೆಯ ಸಮೀಪದ ಕುರುಚಲು ಗಿಡದ ಕಡೆಗೆ ಹೆಜ್ಜೆ ಹಾಕಿದೆ.
ಬೆಟ್ಟದ ತಪ್ಪಲಿನಲ್ಲಿರುವ ಕಲ್ಲುಬಂಡೆಯ ಮೇಲೆ ಹಿಂದೆಯೂ ಸಾಕಷ್ಟು ಬಾರಿ ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ಬಳಿಕ ಸಾರ್ವಜನಿಕರ ಒತ್ತಾಯದ ಹಿನ್ನೆಲೆ ಬೆಟ್ಟದ ಸಮೀಪ ವಿರುವ ಜಿನನಾಥ ಬೆಟ್ಟದ ಸಮೀಪ ಬೋನ್ ಇಡಲಾಗಿತ್ತು. ಪರಿಣಾಮ ಎರಡು ಚಿರತೆಗಳು ಸೆರೆಯಾಗಿದ್ದವು. ಇದೀಗ ಮತ್ತೆ ಚಿರತೆ ಜೈನ ಮಠದೊಳಗೆ ಬಂದಿರುವುದು ಮಠದವರಿಗೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಜನರನ್ನ ಕೂಡ ಆತಂಕಕ್ಕೀಡು ಮಾಡಿದೆ.
ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚಂದ್ರಗಿರಿಯ ಬೆಟ್ಟದ ನಡುವೆ ಮತ್ತು ತಪ್ಪಲಿನಲ್ಲಿರುವ ಚಿರತೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಸ್ಥಳೀಯರ ಆಗ್ರಹ.