ಹಾಸನ : ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯುವುದನ್ನು ಪ್ರಶ್ನಿಸಿದ ಅರಕೆರೆ ಗ್ರಾಮದ ದಲಿತ ಯುವಕರಿಬ್ಬರನ್ನು ಶುಕ್ರವಾರ ಸಂಜೆ ದೇವಾಲಯದ ಕಂಬಕ್ಕೆ ಕಟ್ಟಿಹಾಕಿ, ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅರಕೆರೆ ಗ್ರಾಮದ ನಾಗಮ್ಮ ಸಿದ್ದಯ್ಯ ಎಂಬವರು ಪಕ್ಕದ ಬೆಳುವಳ್ಳಿ ಗ್ರಾಮದ ಕೆರೆಯಂಗಳ ಸಮೀಪವಿರುವ ಜಮೀನನ್ನು ಸುಮಾರು 35 ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ಈ ಜಮೀನಿನಲ್ಲಿ ಅದೇ ಗ್ರಾಮದ ಕೆಲವರು ಹಲವು ದಿನಗಳಿಂದ ಜೆಸಿಬಿ ಯಂತ್ರದ ಮೂಲಕ 50 ಟ್ರಾಕ್ಟರ್ ಮಣ್ಣು ತುಂಬಿಕೊಂಡು ಹೋಗುತ್ತಿದ್ದರು. ನಾಗಮ್ಮ, ಸಿದ್ದಯ್ಯ ಅವರ ಮಕ್ಕಳಾದ ಹರೀಶ್ ಮತ್ತು ಅಣ್ಣಯ್ಯ ಸ್ಥಳಕ್ಕೆ ಹೋಗಿ, ಮಣ್ಣು ತುಂಬುವುದನ್ನು ತಡೆಯಲು ಮುಂದಾಗಿದ್ದಾರೆ. ಆಗ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾದ ಯುವಕರಿಬ್ಬರನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳುವಳ್ಳಿ ಗ್ರಾಮದ ಪ್ರಸನ್ನ, ರಘು, ಶಿವಕುಮಾರ್, ಅಶೋಕ್, ಅಭಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‌ಐ ಮಾಹಿತಿ ನೀಡಿದರು.
ಆಸ್ಪತ್ರೆಗೆ ಜಾವಗಲ್ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್ಸ್ಪೆಕ್ಟ್ರರ್ ಚೆಲುವಮೂರ್ತಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.