ಹಾಸನ: ಮುಂದಿನ ಬಾರಿ ನಮ್ಮ ಅರಸೀಕೆರೆ ಗಣಪತಿ ಪ್ರತಿಷ್ಠಾಪನೆಗೆ ಯಾವುದೇ ವಿಘ್ನ ಎದುರಾಗದಂತೆ ಮತ್ತು ಈ ಕೊರೊನಾ ಎಂಬ ಹೆಮ್ಮಾರಿ ನಶಿಸಲಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ರು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ 79ನೇ ಗಣೇಶ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದ ಕ್ಷೇತ್ರದ ಗಣಪತಿಯನ್ನ 4 ತಿಂಗಳ ಹಿಂದೆಯೇ ಅರಸೀಕೆರೆಯ ದೊಡ್ಡಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಿ ಮೂರ್ತಿ ತಯಾರು ಮಾಡುವ ಕೆಲಸ ಶುರುಮಾಡಲಾಗಿತ್ತು. ಈ ವರ್ಷದ 79ನೇ ಗಣಪತಿ ಮಹೋತ್ಸವವನ್ನು 79 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಬೇಕಿತ್ತು. ಇಂದು ಕೊರೊನಾ ಬಂದ ಹಿನ್ನಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಗಣಪತಿ ಮಹೋತ್ಸವವನ್ನ ಆಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತದ ಅನುಮತಿ ಪಡೆದು ಈ ಬಾರಿ ಕೇವಲ 7 ದಿನಗಳ ಕಾಲ ಮಹೋತ್ಸವವನ್ನು ನಡೆಸುವ ಮೂಲಕ ನಿಮಜ್ಜನೆ ಮಾಡಲಾಗುತ್ತದೆ.
ಅರಸೀಕೆರೆ ಗಣಪನನ್ನ ಪ್ರತಿವರ್ಷ ಬಸವಜಯಂತಿ ದಿನದಂದು ಕೆರೆಯಲ್ಲಿ ಗಂಗೆಪೂಜೆ ಸಲ್ಲಿಸಿ ಕೆರೆಯ ಮಣ್ಣನ್ನ ತಂದು ಅರಸೀಕೆರೆಯ ಶಿಲ್ಪಿ ಗಣಪತಿ ಮಹದೇಶ್ ಕುಟುಂಬ ಸುಮಾರು 7 ದಶಕಗಳಿಂದ ತಯಾರು ಮಾಡುತ್ತಿದ್ದಾರೆ. ಈ ಬಾರಿ ಆ ಕುಟುಂಬ ಸಾವಿರಾರು ಗಣಪತಿಯನ್ನು ತಯಾರು ಮಾಡಿದ್ದು, ಕೊಳ್ಳುವವರಿಲ್ಲದೇ ಕಂಗಾಲಾಗಿದ್ದಾರೆ. ಈ ಬಾರಿಯ ಅರಸೀಕೆರೆ ಗಣಪತಿ ಮಹೋತ್ಸವಕ್ಕೆ 10.5 ಅಡಿ ಗಣಪತಿಯನ್ನ ಮಾಡಿರೋದು ವಿಶೇಷ.