ಹಾಸನ: ಚುನಾವಣಾ ಆಯೋಗ ಜಾರಿಗೆ ತಂದಿರುವ ಸಿ-ವಿಜಿಲ್ ಆನ್ಲೈನ್ ಅಫ್ಲಿಕೇಷನ್ನಲ್ಲಿ ಜಿಲ್ಲೆಯಲ್ಲಿ 310 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ 310 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 52 ಪ್ರಕರಣಗಳಲ್ಲಿ ಮಾತ್ರ ವಾಸ್ತವ ಬೆಳಕಿಗೆ ಬಂದಿವೆ. ಪ್ರಕರಣಗಳ ಸತ್ಯಾಸತ್ಯತೆ ತಿಳಿಯಲು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿ ಉಲ್ಲಂಘನೆಯಡಿ ಜಿಲ್ಲೆಯಲ್ಲಿ 24 ಪ್ರಕರಣಗಳು ದಾಖಲಾಗಿವೆ. ಅಲ್ಲದೆ,1.92 ಲಕ್ಷ ರೂಪಾಯಿ ಮೌಲ್ಯದ 43,886 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಚೆಕ್ ಪೋಸ್ಟ್ಗಳಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 2,54,800 ಹಣವನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ ಇದು ಜಾನುವಾರು ಖರೀದಿಗೆ ತೆಗೆದುಕೊಂಡು ಹೋಗುತ್ತಿದ್ದ ಹಣ ಎಂದು ತಿಳಿದುಬಂದಿದೆ. ಈ ವಾರದೊಳಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ವಿಜಯ ಪ್ರಕಾಶ್ ಅವರ ನೇತೃತ್ವದಲ್ಲಿ ಸಭೆ ಕರೆದು ವಿಚಾರಿಸಿ ಹಣ ಮರುಪಾವತಿಸಲಾಗುವುದು ಎಂದು ಹೇಳಿದರು.