ಗದಗ: ಕಳೆದ ವಾರ ಮೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಗುಲಿ ಮೂವರು ಮೃತಪಟ್ಟಿದ್ದರು. ಇಹಲೋಕ ತ್ಯಜಿಸಿದ ಅಭಿಮಾನಿಗಳ ಕುಟುಂಬದವರಿಗೆ ಇದೀಗ ರಾಕಿಂಗ್ ಸ್ಟಾರ್ ಯಶ್ ಟೀಮ್ ಕಡೆಯಿಂದ ಪರಿಹಾರ ವಿತರಣೆ ಮಾಡಲಾಗಿದೆ. ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿದೆ.
ಸೂರಣಗಿ ಗ್ರಾಮಕ್ಕೆ ಯಶ್ ತಂಡ ಭೇಟಿ: ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಇಂದು ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮನೆ ಮಕ್ಕಳನ್ನು ಕಳೆದುಕೊಂಡಿರುವ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ, ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ. ಪರಿಹಾರದ ಧನವಾಗಿ 5 ಲಕ್ಷ ರೂ. ನೀಡಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನವರಿ 07 ರ ರಾತ್ರಿ ದುರಂತ ಸಂಭವಿಸಿತ್ತು. ಯಶ್ ಹುಟ್ಟುಹಬ್ಬದ ಕಟೌಟ್ ನಿಲ್ಲಿಸಲು ಮುಂದಾಗಿದ್ದ ಮೂವರು ಯುವಕರು ವಿದ್ಯುತ್ ತಗುಲಿ ಮೃತಪಟ್ಟಿದ್ದರು. ಸೂರಣಗಿಯ ಮುರಳಿ, ನವೀನ ಹಾಗೂ ಹನಮಂತ ಎಂಬುವರು ಪ್ರಾಣ ಕಳೆದುಕೊಂಡಿದ್ದರು. ಈ ಮೂವರ ಕುಟುಂಬಕ್ಕೂ ತಲಾ ಐದು ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಘಟನೆಯಲ್ಲಿ ಇತರೆ ಮೂವರು ಯುವಕರಿಗೆ ಗಾಯಗೊಂಡಿದ್ದರು.
ಪೋಷಕರಿಗೆ ಸಾಂತ್ವನ ಹೇಳಿದ್ದ ಯಶ್: ಅವಘಡದ ಮಾಹಿತಿ ತಿಳಿದು ಜ. 8ರಂದು ನಟ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಯುವಕರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮೃತರ ಮನೆಗಳಿಗೆ ತೆರಳಿ ಪೋಷಕರಿಗೆ ಧೈರ್ಯ ತುಂಬಿದ್ದರು. ಈ ವೇಳೆ ಪೋಷಕರು ತಮ್ಮ ನೋವನ್ನು ತೋಡಿಕೊಂಡಿದ್ದರು. ಸಾಂತ್ವನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಯಶ್, ' ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರೂ ಇಷ್ಟಪಡಲ್ಲ' ಎಂದು ಬುದ್ಧಿಮಾತು ಹೇಳಿದ್ದರು. ಬಳಿಕ ಗದಗದ ಜಿಮ್ಸ್ ಆಸ್ಪತ್ರೆಗೆ ತೆರಳಿ, ಗಾಯಾಳು ಯುವಕರ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ : ಯಶ್ ಅಭಿಮಾನಿಗಳ ಸಾವು: ನಾಳೆ ನಟನ ಆಪ್ತರಿಂದ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ
ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಯುವಕರ ಮೃತಪಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ, ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು.
ಇದನ್ನೂ ಓದಿ : ರಾಮ ನಾಮ ಜಪಿಸುವಂತೆ ಮನವಿ ಮಾಡಿದ ಗಾಯಕಿ ಚಿತ್ರಾ ಮೇಲೆ ಸೈಬರ್ ದಾಳಿ