ಗದಗ: ನಿನ್ನೆ(ಶನಿವಾರ) ರಾತ್ರಿ ಚೆಕ್ ಪೋಸ್ಟ್ಗಳಲ್ಲಿ ಕಾರ್ಯಾಚರಣೆ ನಡೆಸಿದ ಗಜೇಂದ್ರಗಡ ಪೊಲೀಸರು ದಾಖಲೆಯಿಲ್ಲದ 6 ಲಕ್ಷ 40 ಸಾವಿರ ಹಣ ಹಾಗೂ 5 ಲಕ್ಷ ಬೆಲೆ ಬಾಳುವ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಗಜೇಂದ್ರಗಡ ಬಳಿ ಇರುವ ಇಲಕಲ್ಲ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಹಣ ಸಿಕ್ಕಿದೆ.
ಕೊಪ್ಪಳದಿಂದ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಹಣ ಹಾಗೂ ಬೆಂಗಳೂರಿನಿಂದ ಗದಗಕ್ಕೆ ಬರುತ್ತಿದ್ದ ಲಾರಿಯಲ್ಲಿ ಬಟ್ಟೆ ಮಟಿರಿಯಲ್ ಪತ್ತೆಯಾಗಿದೆ. "ತಪಾಸಣೆ ವೇಳೆ ಹಣ ಹಾಗೂ ಬಟ್ಟೆಗಳು ಪತ್ತೆಯಾಗಿದ್ದು, ಇದಕ್ಕೆ ಸೂಕ್ತ ದಾಖಲೆ ಇರಲಿಲ್ಲ. ಹಾಗಾಗಿ ಹಣ ಹಾಗೂ ಬಟ್ಟೆ ಮಟಿರಿಯಲ್ಸ್ ವಶಕ್ಕೆ ಪಡೆಯಲಾಗಿದೆ" ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
9 ಲಕ್ಷ ಹಣದ ಜತೆ ಸೀರೆ, ಬಟ್ಟೆ ಜಪ್ತಿ: ಸೂಕ್ತ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 9 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಆಲಮೇಲ ತಾಲೂಕಿನ ದೇವಣಗಾಂವ್ ಚೆಕ್ಪೋಸ್ಟ್ ಬಳಿ ನಿನ್ನೆ ನಡೆದಿದೆ. ಚುನಾವಣೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇರಳ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಸಮೀರ್ ಅಲಿ ವಲಕ್ಕಿನ್ ಎಂಬಾತ ಬಳಿ ಒಟ್ಟು 9 ಲಕ್ಷ ರೂಪಾಯಿ ಹಣ ದೊರೆತಿದೆ. ಈ ಹಣವನ್ನು ಕೇರಳದಿಂದ ಅಫ್ಜಲಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಹಣ ಮತ್ತು ಕಾರನ್ನು ಸೀಜ್ ಮಾಡಿದ್ದು, ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀರೆ, ಬಟ್ಟೆ ವಶ: ಮತ್ತೊಂದು ವಾಹನದಲ್ಲಿ ಸಾಗಿಸುತ್ತಿದ್ದ ಆಧಾರರಹಿತ ಸೀರೆ, ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು 260 ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಡಚಣದಿಂದ ಬಟ್ಟೆ ಖರೀದಿಸಿ ಕಲಬುರಗಿಯ ಆಳಂದಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೀರೆಗಳೊಂದಿಗೆ ವ್ಯಕ್ತಿಯನ್ನು ಆಲಮೇಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವಿಜಯಪುರ : ದೇವಣಗಾಂವ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದ 9 ಲಕ್ಷ ಹಣದ ಜೊತೆ ಸೀರೆ, ಬಟ್ಟೆ ಜಪ್ತಿ