ಗದಗ: ಸಾಂಕ್ರಾಮಿಕ ಕೊರೊನಾ ವೈರಸ್ ಇದೀಗ ಹಳ್ಳಿಗಳಿಗೆ ಲಗ್ಗೆ ಹಾಕಿ ಸಾಲು ಸಾಲು ಸಾವಿಗೆ ಕಾರಣವಾಗ್ತಿದೆ. ಇದೇ ಕಾರಣಕ್ಕಾಗಿ ಅನೇಕ ಹಳ್ಳಿಗಳು ಕೋವಿಡ್ ಹಾಟ್ಸ್ಪಾಟ್ಗಳಾಗಿ ಮಾರ್ಪಟ್ಟಿವೆ.ಆದರೆ ಇಲ್ಲೊಂದು ಗ್ರಾಮದಲ್ಲಿ ಮಹಾಮಾರಿ ಹಾವಳಿ ತಪ್ಪಿಸಲು ಹೊಸದೊಂದು ಐಡಿಯಾ ಹುಡುಕಿಕೊಂಡಿದ್ದಾರೆ.
ಸ್ಟ್ರೀಮಿಂಗ್ ವ್ಯವಸ್ಥೆ ಅಳವಡಿಸಿ ಕೊರೊನಾ ಕಂಟ್ರೋಲ್ಗೆ ತಂದಿದ್ದಾರೆ.ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅಲ್ಲಿನ ಜನರ ನಿದ್ದೆಗೆಡಿಸಿತ್ತು. ಸ್ಥಳೀಯ ಶಾಸಕ ಹೆಚ್.ಕೆ. ಪಾಟೀಲ್ ಕೂಡ ಮುತುವರ್ಜಿಯಿಂದ ಆಯುಷ್ ಇಲಾಖೆಗೆ ಮನವಿ ಮಾಡಿದರು. ತಕ್ಷಣವೇ ಅಧಿಕಾರಿಗಳು ಗ್ರಾಮದಲ್ಲಿ ಟೆಂಟ್ ಅಳವಡಿಸಿ, ಆಯುರ್ವೇದ ಔಷಧಿ ಮತ್ತು ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ: ಗೌರಿಬಿದನೂರಿನ ಹೆಣ್ಣು ಮಗಳು ಇದೀಗ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ
ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷಧಿಗಳ ಮೂಲಕ ಐದು ದಿನದ ಕೋರ್ಸ್ ಅಳವಡಿಸಿದ್ದಾರೆ. ಹುಲಕೋಟಿ ಗ್ರಾಮದಲ್ಲಿ 10 ಸಾವಿರ ಜನ ಸಂಖ್ಯೆಯಿದ್ದು, ಇದರಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರಿಗೆ ಸ್ಟ್ರೀಮಿಂಗ್ ಮಾಡಲಾಗ್ತಿದೆ. ಆಯುಷ್ಯ ಇಲಾಖೆಯ ವತಿಯಿಂದ ಈ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಇಲ್ಲಿನ ಜನರಿಗೆ ಬಹಳಷ್ಟು ಪರಿಣಾಮಕಾರಿಯಾಗಿದೆ.
ಏನಿದು ಸ್ಟ್ರೀಮಿಂಗ್?
ಒಲೆ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ನೀರು ಹಾಕಿ ಅದರೊಳಗೆ ಆರಕ್ ಅಜೀಬ್ ಎಂಬ ಆಯುರ್ವೇದ ಔಷಧ ಹಾಕಿ ಬಿಸಿ ಮಾಡುತ್ತಾರೆ. ಆ ಬಿಸಿಯಾದ ನೀರಿನಿಂದ ಬರುವ ಆವಿಯನ್ನ ಪೈಪ್ಗಳ ಮೂಲಕ ಜನರು ಸೇವಿಸುತ್ತಾರೆ. ಇದರಿಂದ ಜನರ ಶ್ವಾಸಕೋಶದಲ್ಲಿನ ಸಮಸ್ಯೆ ನಿವಾರಣೆಯಾಗಿ ಉಸಿರಾಟ ಸರಳವಾಗುತ್ತದೆ. ಜೊತೆಗೆ ಕ್ರಮೇಣವಾಗಿ ಸೋಂಕು ಕಡಿಮೆಯಾಗಿ ಕೊರೊನಾದಿಂದ ಗುಣಮುಖರಾಗುತ್ತಾರೆ.
ಸುಮಾರು 20 ದಿನಗಳಿಂದ ಗ್ರಾಮದಲ್ಲಿ ಈ ಟೆಂಟ್ ಅಳವಡಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿ ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಮತ್ತು ಮನೆಯಲ್ಲಿದ್ದುಕೊಂಡು ಆಯುರ್ವೇದ ಔಷಧಿ ಸೇವನೆಯಿಂದ ಕೊರೊನಾದಿಂದ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ.