ಗದಗ: ಉತ್ತರ ಕರ್ನಾಟಕದಲ್ಲಿ ಒಂದಲ್ಲ ಎರಡಲ್ಲ ಮೂರು ಬಾರಿ ಪ್ರವಾಹ ಬಂದು ಜನರ ಬದುಕನ್ನು ಬೀದಿಗೆ ತಂದಿದೆ. ಇದೀಗ ಮೊನ್ನೆ ತಾನೆ ಬಂದು ಹೋದ ಪ್ರವಾಹ ಇಳಿದು ಎರಡು ದಿನ ಗತಿಸಿದರೂ ಸಹ ಗ್ರಾಮಗಳು ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಇದರಿಂದ ಅಧಿಕಾರಿಗಳು ಮಾಡೋ ಕೆಲಸವನ್ನ ಸ್ವತಃ ಗ್ರಾಮಸ್ಥರೇ ಮಾಡುತ್ತಿದಾರೆ.
ನರಗುಂದ ತಾಲೂಕಿನ ಕೊಣ್ಣೂರ ಸಂಪರ್ಕ ಕಲ್ಪಿಸೋ ಹುಬ್ಬಳ್ಳಿ ಸೊಲ್ಲಾಪುರ 218 ರಾಷ್ಟ್ರೀಯ ಹೆದ್ದಾರಿ, ಈವರೆಗೂ ಕೂಡ ದುರಸ್ತಿಗೊಂಡಿಲ್ಲ. ಸ್ಥಳೀಯರೇ ಜಿಸಿಬಿ ಮೂಲಕ ರಸ್ತೆಯನ್ನ ತಾತ್ಕಾಲಿಕವಾಗಿ ದುರಸ್ತಿ ಮಾಡೋಕೆ ಶುರು ಮಾಡಿದಾರೆ.
ಪ್ರವಾಹ ನಿಂತು ಎರಡು ದಿನ ಕಳೆದ್ರೂ ದುರಸ್ತಿ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ದ ಕೊಣ್ಣೂರು ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಪ್ರವಾಹಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಪ್ರವಾಹದ ನೀರು ಸರಾಗವಾಗಿ ಹರಿಯಲು ಈ ರಸ್ತೆಯನ್ನ ಅಗೆದಿದ್ದರು. ಇದರಿಂದ ಕಳೆದ ಮೂರು ದಿನಗಳಿಂದ ಹೆದ್ದಾರಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಸಾರ್ವಜನಿಕರೇ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.