ಗದಗ: ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ತಬ್ಬಿಕೊಂಡು ಕಣ್ಣೀರು ಹಾಕಿರುವುದಲ್ಲದೆ, ವರ್ಗಾವಣೆ ಆದೇಶ ಹಿಂಪಡೆಯಬೇಕು ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ನಮ್ಮ ಶಿಕ್ಷಕರ ವರ್ಗಾವಣೆ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ ಅವರು, ಆದೇಶ ವಾಪಸ್ ತೆಗೆದುಕೊಳ್ಳದಿದ್ದರೆ ಇನ್ನು ಮುಂದೆ ತರಗತಿಗಳಿಗೆ ಹೋಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವಿ.ಎ.ಪುಲ್ಲಿ ಹಾಗೂ ಎಲ್.ಬಿ.ಮುದೇನವರ್ ವರ್ಗಾವಣೆ ಆಗಿರುವ ಶಿಕ್ಷಕರು. ಆದರೆ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಮ್ಮನ್ನು ಬಿಟ್ಟು ಹೋಗಬೇಡಿ ಎನ್ನುತ್ತಾ ಗೊಳೋ ಎಂದು ಅತ್ತರು. ಅಷ್ಟೇ ಅಲ್ಲ, ಇಂದು ತರಗತಿಗಳನ್ನೇ ಬಹಿಷ್ಕರಿಸಿ ಲಕ್ಷ್ಮೇಶ್ವರ-ಯತ್ನಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.
ಇದೇ ವೇಳೆ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಿಂದ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.