ಗದಗ: ನಗರದ ಗಾಂಧಿ ಸರ್ಕಲ್ ಬಳಿ ಇರುವ ಪುಟ್ಟರಾಜ್ ಫೈನಾನ್ಸ್ ಕಂಪನಿಯಿಂದ ಮೋಸ ಹೋದವರು ಕೇವಲ 20 ರಿಂದ 30 ಜನ ಅಲ್ಲ. ಬರೋಬ್ಬರಿ 150 ರಿಂದ 200 ಜನ ಮೋಸ ಹೋಗಿದ್ದಾರೆ. ನಗರದಲ್ಲಿರುವ ಬಹುತೇಕ ವ್ಯಾಪಾರಸ್ಥರಿಗೆ ಈ ಉದ್ಯಮಿ ಕೋಟಿಗಟ್ಟಲೇ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಫೈನಾನ್ಸ್ ಕಂಪನಿ ಮಾಲೀಕ ವಿಜಯ ಶಿಂಧೆ ವಿರುದ್ಧ ಈ ಆರೋಪ ಕೇಳಿಬಂದಿದೆ.
ಫೈನಾನ್ಸ್ ಮಾಲೀಕ ಶಿಂಧೆ ಸುಮಾರು 20 ವರ್ಷಗಳಿಂದ ಫೈನಾನ್ಸ್ ನಡೆಸುತ್ತಿದ್ದರು. ಮೊದ ಮೊದಲು ಬಹುತೇಕರಿಗೆ ಸಾಲ ನೀಡಿ ಅವರ ವ್ಯಾಪಾರ ಚೆನ್ನಾಗಿ ಆಗುವಂತೆ ನೋಡಿಕೊಂಡಿದ್ದರು. ಹೋಟೆಲ್, ಖಾನಾವಳಿ, ಚೈನೀಸ್ ಕಾರ್ನರ್, ಪಾನಿ ಪುರಿ, ಜೊತೆಗೆ ಗೋಲ್ಡ್ ಶಾಪ್, ದೊಡ್ಡ ಹೋಲ್ ಸೇಲ್ ಮತ್ತು ರಿಟೇಲ್ ಕಿರಾಣಿ ಶಾಪ್ ಓನರ್ ಬಳಿ ಫೈನಾನ್ಸ್ ವ್ಯವಹಾರ ಬೆಳೆಸಿದ್ದರು. ಆರ್.ಡಿ, ಫಿಗ್ಮಿ, ಡೆಪೋಸಿಟ್, ಕಡಿಮೆ ದರದಲ್ಲಿ ಬಂಗಾರ ಮಾರಾಟ ಮತ್ತು ಬಂಗಾರದ ತೂಕದಷ್ಟು ಹಣ ಡೆಪೋಸಿಟ್, ಸೈಟ್ ಮಾರಾಟದ ವ್ಯವಹಾರ, ಮನೆ ಖರೀದಿ ವ್ಯವಹಾರ, ಹೀಗೆ ನಾನಾ ರೀತಿಯಲ್ಲಿ ಕೋಟಿ ಕೋಟಿ ರೂ. ವ್ಯವಹಾರ ಮಾಡಿದ್ದರು ಎನ್ನಲಾಗ್ತಿದೆ.
ಕೋಟಿಗಟ್ಟಲೇ ಹಣ ಇಟ್ಟಿದ್ದ ಖಾನಾವಳಿ ಮಾಲೀಕ: ಗದಗ ನಗರ ಅಷ್ಟೇ ಅಲ್ಲದೇ, ಬಳ್ಳಾರಿ, ಹುಬ್ಬಳ್ಳಿ, ಹಾವೇರಿ, ಬಾಗಲಕೋಟೆ, ಮಹಾರಾಷ್ಟ್ರದ ಸಾಂಗಲಿ ಸೇರಿದಂತೆ ಹಲವು ಕಡೆ ಸಹ ಫೈನಾನ್ಸ್ ವ್ಯವಹಾರ ಮಾಡಿದ್ದರು. ಒಬ್ಬೊಬ್ಬ ವ್ಯಾಪಾರಸ್ಥರು ಸುಮಾರು ಕೋಟಿಗಟ್ಟಲೆ ಹಣ ಪಿಗ್ಮಿ ತುಂಬಿದ್ದರು. ಒಂದು ಮೂಲಗಳ ಪ್ರಕಾರ, ನಗರದ ಪ್ರತಿಷ್ಠಿತ ಲಿಂಗಾಯತ ಖಾನಾವಳಿ ಮಾಲೀಕ ಸುಮಾರು 3 ಕೋಟಿ ರೂ. ಪಿಗ್ಮಿ ತುಂಬಿದ್ದರು ಅಂತ ಮೂಲಗಳು ಹೇಳ್ತಿವೆ. ಹೀಗೆ ನಗರದ ಗೋಲ್ಡ್ ಶಾಪ್ನಲ್ಲಿಯೂ ಸಹ ಕೋಟಿಗಟ್ಟಲೇ ವ್ಯವಹಾರ ಮಾಡ್ತಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ ಕೇಸ್.. ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ವೈದ್ಯನ ಬಣ್ಣ
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಪುಟ್ಟರಾಜ್ ಫೈನಾನ್ಸ್ ಮಾಲೀಕ ವಿಜಯ್ ಶಿಂಧೆ ನಾಪತ್ತೆಯಾಗಿದ್ದರು. ಸದ್ಯ ಕೆಲ ದಿನಗಳ ಹಿಂದೆ ಪೊಲೀಸರು ಅವರನ್ನು ಹೆಡೆಮುರಿ ಕಟ್ಟಿದ್ದಾರೆ. ಆದ್ರೆ ಕೇವಲ 25 ರಿಂದ 30 ಜನರು ಮಾತ್ರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದ್ರೆ ಉಳಿದ ಬಹುತೇಕ ವ್ಯಾಪಾರಸ್ಥರು ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ. ಯಾಕಂದ್ರೆ ಆತ ಹೊರಗಡೆ ಬಂದ ಮೇಲೆ ನಮ್ಮ ದುಡ್ಡು ವಾಪಸ್ ಕೊಡಬಹುದು ಅನ್ನೋ ಭ್ರಮೆಯಲ್ಲಿ ಕೆಲವು ಜನ ಇದ್ರೆ. ಇನ್ನೂ ಕೆಲವು ಜನ ಸರ್ಕಾರಕ್ಕೆ ಮೋಸ ಮಾಡಿ ಶಿಂಧೆ ಫೈನಾನ್ಸ್ ನಲ್ಲಿ ಅನಧಿಕೃತವಾಗಿ ಪಿಗ್ಮಿ ಮಾಡಿದ್ದರ ಹಿನ್ನೆಲೆಯಲ್ಲಿ ಭಯಪಟ್ಟು ದೂರು ನೀಡಲು ಮುಂದೆ ಬರ್ತಿಲ್ಲ ಅಂತ ತಿಳಿದುಬಂದಿದೆ.
ಇನ್ನೂ ಕೆಲವರು ಆರೋಪಿ ಶಿಂಧೆ ಇರುವ ಜೈಲಿಗೆ ಹೋಗಿ ಭೇಟಿ ನೀಡಿ ತಮ್ಮ ಹಣ ವಾಪಸ್ ನೀಡದಿದ್ದರೂ ಪರವಾಗಿಲ್ಲ, ತಮ್ಮ ಹೆಸರು ಹೇಳದಂತೆ ಸೂಚನೆ ನೀಡಿ ಬಂದಿದ್ದಾರೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಗದಗ ಎಸ್ಪಿ ಶಿವಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಒಂದು ಸಣ್ಣ ದಾಖಲೆ ಇದ್ರೂ ಪರವಾಗಿಲ್ಲ. ಮುಂದೆ ಬಂದು ದೂರು ಕೊಟ್ರೆ ಆ ಪ್ರಕಾರವಾಗಿ ತನಿಖೆ ಮಾಡಲು ಅನುಕೂಲ ಆಗುತ್ತೆ ಅಂತ ತಿಳಿಸಿದ್ದಾರೆ.