ಗದಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ಗೆ ಮತ್ತೊಂದು ಜೀವ ಬಲಿಯಾಗಿದ್ದು, 95 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ಗೆ ಸ್ಪಷ್ಟಪಡಿಸಿರುವ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಕೊಪ್ಪ ಗ್ರಾಮ 95 ವರ್ಷದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅವರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದರು.
ವೃದ್ಧೆಯ ಮನೆಯವರ ಒಪ್ಪಿಗೆ ಮೇರೆಗೆ ಗದಗ ಅಥವಾ, ಗಜೇಂದ್ರಗಡದಲ್ಲಾದರೂ ಅಂತ್ಯಕ್ರಿಯೆ ಮಾಡಲಾಗುವುದು ಎಂದರು. ಮೃತ ವೃದ್ಧೆ ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂ. 25 ರಂದು ವೃದ್ಧೆಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿನ್ನೆ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಆದ್ರೆ ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 12 ಗಂಟೆ ಸುಮಾರಿಗೆ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ವೃದ್ಧೆಯ ವರದಿ ಬರುವ ಮುನ್ನ ಸಿಬ್ಬಂದಿ ಸಿಟಿ ಸ್ಕ್ಯಾನ್, ಬ್ಲಡ್ ಟೆಸ್ಟ್ಗೆ ಕರೆದೊಯ್ದಿದ್ದರು. ಇದೀಗ ಅವರಿಗೂ ಭಯ ಶುರುವಾಗಿದೆ. ಸೋಂಕಿನಿಂದ ಸಾವನ್ನಪ್ಪಿದ ವೃದ್ಧೆ ವರದಿ ಇಂದಿನ ಹೆಲ್ತ್ ಬುಲೆಟಿನ್ನಲ್ಲಿ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಗದಗದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.