ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ 14 ಕಲ್ಲು ಕ್ವಾರಿಗಳಿಗೆ ತಕ್ಷಣ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ.
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಕ್ವಾರಿಗಳು ನಾಯಿ ಕೊಡೆಯಂತೆ ತಲೆ ಎತ್ತಿವೆ. ಸಕ್ರಮದ ಹೆಸರಲ್ಲಿ ಕೆಲ ಕ್ವಾರಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಲೂಟಿ ನಡೆಸಿರುವ ಆರೋಪ ಕೇಳಿ ಬಂದಿತ್ತು. ಉತ್ತರ ಕರ್ನಾಟಕದ ಸಹ್ಯಾದ್ರಿ ಸೆರಗಿನಲ್ಲಿ ಸಾಕಷ್ಟು ಕಲ್ಲು ಗಣಿಗಾರಿಕೆ ಕ್ವಾರಿಗಳು ಇವೆ. ಸಕ್ರಮ, ಅಕ್ರಮ ಕ್ವಾರಿಗಳೂ ಇವೆ. ಆದರೆ ಈಗ ಗಣಿ ಇಲಾಖೆಯಿಂದ ಅನುಮತಿ ಪಡೆದ ಕಲ್ಲು ಗಣಿಗಾರಿಕೆ ಕ್ವಾರಿಗಳಿಗೆ ಕಂಟಕ ಎದುರಾಗಿದೆ. ಯಾಕಂದ್ರೆ ಈ ಕಲ್ಲಿನ ಕ್ವಾರಿಗಳು ನಂಬಿಯೇ ಕೋಟಿ ಕೋಟಿ ಹಣ ಹೂಡಿಕೆ ಮಾಡಿ ಕ್ರಷರ್ ಘಟಕಗಳನ್ನು ಹಾಕಿದ್ದಾರೆ.
ಈ 14 ಘಟಕಗಳು ಪ್ರಭಾವಿ ಶಾಸಕರ ಸಂಬಂಧಿಕರು, ಪ್ರಭಾವಿ ವ್ಯಕ್ತಿಗಳಿಗೆ ಸೇರಿವೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಅಮೂಲ್ಯವಾದ ಪಂಚ ಖನಿಜಗಳು ಪ್ರಭಾವಿ ಗಣಿ ಕುಳಗಳ ಪಾಲಾಗುತ್ತಿರುವ ಅಂಶವು ಬೆಳಕಿಗೆ ಬಂದಿವೆ. ಒಂದು ವರ್ಷದ ಹಿಂದೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಈ ಕ್ರಮ ಕೈಗೊಳ್ಳಲು ಆದೇಶಿಸಿತ್ತು. ಈಗ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ.