ಗದಗ : ಶಾಸಕ ಹೆಚ್ ಕೆ ಪಾಟೀಲ್ರಿಗೆ ಉದ್ಯೋಗ ಇಲ್ಲ, ಹೈಕಮಾಂಡ್ ಮೆಚ್ಚಿಸೋದಕ್ಕಾಗಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಕಿಡಿ ಕಾರಿದ್ದಾರೆ.
ಹೆಚ್ ಕೆ ಪಾಟೀಲ್ ಪಿಪಿಇ ಕಿಟ್ಗಳ ಕೊರತೆಯಿದೆ ಎಂದು ಆರೋಪಿಸಿದ್ದರು. ಜೊತೆಗೆ ಜಿಲ್ಲಾಡಳಿತ ಮತ್ತು ಸಚಿವರು ವಿಫಲರಾಗಿದ್ದಾರೆ ಎಂದಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿ ಸಿ ಪಾಟೀಲ್, ಹೆಚ್ ಕೆ ಪಾಟೀಲ್ ಯಾರಿಗೋ ಒಬ್ಬರಿಗೆ ಪಿಪಿಇ ಕಿಟ್ ಕೊಡಿಸಬೇಕು ಅನಿಸುತ್ತೆ. ಅದಕ್ಕೆ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ವಂಗ್ಯವಾಡಿದರು.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ ಆಗಲು ಕಾರಣ ಮನೆ ಮನೆ ಸರ್ವೇಯಲ್ಲಿ ಮುಂಚೂಣಿಯಲ್ಲಿರೋದು. ಗದಗ ಜಿಲ್ಲೆ ಸರ್ವೇ ಕಾರ್ಯ ಮಾಡುವುದರಲ್ಲಿ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಹಾಸನ, ಕೊಪ್ಪಳ, ಧಾರವಾಡ ನಂತರ ಗದಗ 4ನೇ ಸ್ಥಾನದಲ್ಲಿದೆ ಎಂದರು.
ಕೊರೊನಾ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಬೆಡ್ಗಳ ಅವಶ್ಯಕತೆ ಬಿದ್ದರೆ ನಗರದ ಮಧ್ಯದಲ್ಲಿ ಇರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಜಿಲ್ಲೆಯಲ್ಲಿ 33 ಕಂಟೇನ್ಮೆಂಟ್ ಝೋನ್ಗಳಿವೆ. ಪಿಪಿಇ ಕಿಟ್, ಇತರೆ ಉಪಕರಣಗಳಿಗೆ ತೊಂದರೆ ಇಲ್ಲ. ಜಿಲ್ಲೆಯ ಮೊರಾರ್ಜಿ ವಸತಿ ನಿಲಯಗಳಲ್ಲಿ ಸೋಂಕಿತರನ್ನು ದಾಖಲಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ 30 ಕೇಂದ್ರಗಳನ್ನು ಗುರುತಿಸಲಾಗಿದೆ. 1315 ಹಾಸಿಗೆ ಲಭ್ಯ ಇವೆ. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುವುದು. ತಹಶೀಲ್ದಾರರು ಹೆಚ್ಚು ಸಮಯವನ್ನು ಕೋವಿಡ್ಗೆ ಬಳಕೆ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಜಿಲ್ಲೆಯ ಎಲ್ಲಾ ಮೊರಾರ್ಜಿ ಶಾಲೆಗಳನ್ನು ಶುಚಿಗೊಳಿಸಲು ಸೂಚನೆ ನೀಡಲಾಗಿದೆ ಎಂದರು.