ಗದಗ : ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ 12 ನೇ ತಾರೀಖಿನಂದು ಪತ್ರ ಬಂದಿದ್ದು, ನಾವು ನಿಮಗೆ ಅಕ್ಕಿ ಕೊಡುತ್ತೇವೆ ಎಂದು ಉಲ್ಲೇಖ ಮಾಡಿದ್ದರು. ಬಳಿಕ 13 ರಂದು ಮತ್ತೊಂದು ಪತ್ರವನ್ನು ಕಳುಹಿಸಿದ್ದು, ಅಕ್ಕಿ ನೀಡಲು ಅಸಾಧ್ಯ. ರಾಜ್ಯ ಸರ್ಕಾರಗಳಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದು ಸಚಿವ ಎಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ.
13 ರಂದು ಕಳುಹಿಸಿದ ಪತ್ರದಲ್ಲಿ ನಮ್ಮ ಬಳಿ 15 ಲಕ್ಷ ಮೆಟ್ರಿಕ್ ಟನ್ ಅಕ್ಕಿಯಿದೆ. ಅದನ್ನು ಲಿಕ್ವಿಡೇಟ್ ಮಾಡಲು ಖಾಸಗಿಯವರಿಗೆ ಬಿಡುಗಡೆ ಮಾಡಿ. ಅದೇ ದರದಲ್ಲಿ ಅಕ್ಕಿ ಖರೀದಿ ಮಾಡಲು ರಾಜ್ಯಗಳಿಗೆ ಬಿಡುಗಡೆ ಮಾಡಬೇಡಿ ಅಂತಾ ತಿಳಿಸಿದ್ದಾರೆ. ಇದು ಜನ ವಿರೋಧಿ ಅಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಅಕ್ಕಿ ವಿತರಣೆ ಗೊಂದಲ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು?
ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಈಡುವವರಿಗೆ ಧಕ್ಕೆ ಕೊಡುವುದೆಂದರೆ ಹೇಗೆ?, ಖಾಸಗಿಯವರಿಗೆ ಅಕ್ಕಿ ಕೊಡುತ್ತಿದ್ದಾರೆ. ಆದರೆ ಬಡವರಿಗೆ ಅಕ್ಕಿ ಹಂಚುವ ಸರ್ಕಾರಗಳಿಗೆ ಇಲ್ಲ ಎಂದರೆ ಹೇಗೆ?, ಇದನ್ನು ಬೇಕು ಅಂತಲೇ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜನದ್ರೋಹಿ ನಿಲುವು ತಾಳುತ್ತಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಈ ಯೋಜನೆಯನ್ನು ನಾವು ಘೋಷಣೆ ಮಾಡಿದ್ದೇವೆ. ಹಾಗಾಗಿ, ನಾವು ಅನುಷ್ಠಾನ ಮಾಡುತ್ತೇವೆ ಎಂದರು.
ಸತೀಶ್ ಜಾರಕಿಹೊಳಿ ಹೇಳಿದ್ದೇನು? : ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, "ಸದ್ಯಕ್ಕೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಬಡವರಿಗೆ ಅಕ್ಕಿ ವಿತರಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ. ಬಿಜೆಪಿಯವರು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಜನರಿಗೆ ಅಕ್ಕಿ ನೀಡುವುದು ಬಿಜೆಪಿಗೆ ಸಂಬಂಧಿಸಿದ ವಿಚಾರವಲ್ಲ. ಪ್ರತಿಭಟನೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಸರ್ಕಾರ ಹಲವು ರಾಜ್ಯಗಳ ಜೊತೆ ಮಾತುಕತೆ ನಡೆಸಿದೆ, ಕಾಲಾವಕಾಶ ಬೇಕು. ಎಥೆನಾಲ್‌ಗೆ ಅಕ್ಕಿ ಹೆಚ್ಚು ಹೋಗುತ್ತಿದೆ. ಕೇಂದ್ರ ಸರ್ಕಾರವು ಜನರಿಗೆ ಊಟಕ್ಕೆ ಅಕ್ಕಿ ನೀಡುವುದನ್ನು ಬಿಟ್ಟು ಎಥೆನಾಲ್‌ಗೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸುದ್ದಿಗಳನ್ನು ಓದಿ: ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜಕೀಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
'ಅನ್ನಭಾಗ್ಯ ಯೋಜನೆ'ಯಡಿ ಅಕ್ಕಿ ನೀಡಲು ನಿರಾಕರಣೆ.. ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ: DCM