ಗದಗ: ನರಗುಂದದಲ್ಲಿ ರೈತ ಹುತಾತ್ಮ ದಿನವನ್ನ ಸರಳವಾಗಿ ಆಚರಿಸುವಂತೆ ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸೂಚಿಸಿದ್ದಾರೆ.
ನರಗುಂದ ಬಂಡಾಯ ನಡೆದು ಇಂದಿಗೆ 40 ವರ್ಷಗಳು ಕಳೆದಿವೆ. ಬಂಡಾಯದಲ್ಲಿ ರೈತರು ಪೊಲೀಸರ ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ನರಗುಂದದಲ್ಲಿ ರೈತ ಹುತಾತ್ಮ ದಿನದ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಆದ್ರೆ ಈ ಬಾರಿ ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದರಿಂದ ಈ ಬಾರಿ ರೈತ ಹುತಾತ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸುವಂತೆ ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸೂಚನೆ ನೀಡಿದ್ದಾರೆ.

ರೈತ ಹುತಾತ್ಮ ದಿನ ಅಂದ್ರೆ,1980 ರಲ್ಲಿ ಭೂಮಿಗೆ ನೀರು ಬರದಿದ್ದರೂ "ನೀರಾವರಿ ಅಭಿವೃದ್ಧಿ ಕರ" ಅನಿವಾರ್ಯವಾಗಿ ಕಟ್ಟಬೇಕಾಗಿತ್ತು. ಇದನ್ನು ಖಂಡಿಸಿ ರೈತರು ಆಗ ಸಿಡಿದೆದ್ದರು. ಆ ವೇಳೆ ನಡೆದ ಗೋಲಿಬಾರ್ನಲ್ಲಿ ಚಿಕ್ಕನರಗುಂದ ರೈತ ವೀರಪ್ಪ ಕಡ್ಲಿಕೊಪ್ಪ, ಅಳಗವಾಡಿ ಬಸಪ್ಪ ಲಕ್ಕುಂಡಿ ಎಂಬ ರೈತರು ಮೃತಪಟ್ಟಿದ್ದರು. ಅವರ ನೆನಪಿಗಾಗಿ ನರಗುಂದ ಹಾಗೂ ನವಲಗುಂದದಲ್ಲಿ ಪ್ರತಿ ವರ್ಷ ಜುಲೈ 21 ರಂದು ರೈತ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಭಾಗಿಯಾಗುತ್ತಿದ್ದರು. ಆದ್ರೆ ಈ ವರ್ಷ ಕೋವಿಡ್ ಇರುವುದರಿಂದ ಅದ್ದೂರಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಸರಳವಾಗಿ ರೈತ ಹುತಾತ್ಮ ದಿನ ಆಚರಿಸಬೇಕು. ಒಬ್ಬೊಬ್ಬರಾಗಿ ಬಂದು ವೀರಗಲ್ಲಿಗೆ ಹೂ ಮಾಲೆ ಹಾಕಿ ಗೌರವ ಸಲ್ಲಿಸಬೇಕು. ರೈತರು, ರಾಜಕೀಯ ಮುಖಂಡರು, ಮಠಾಧೀಶರು, ಸಂಘಟಕರು, ಸಾರ್ವಜನಿಕರು ಗುಂಪು ಗುಂಪಾಗಿ ಸೇರಬಾರದು. ಈ ವರ್ಷ ಮೆರವಣಿಗೆ, ಸಭೆ, ಸಮಾರಂಭ ಮಾಡಬಾರದು ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸೂಚಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಜಿಲ್ಲಾದ್ಯಂತ ಹಾಫ್ ಡೇ ಲಾಕ್‌ಡೌನ್ ಜಾರಿ ಹಿನ್ನೆಲೆ, ನಿಗದಿತ ಅವಧಿಯಲ್ಲಿ ಎಲ್ಲರೂ ಮಾಲಾರ್ಪಣೆ ಮಾಡಿ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.