ಗದಗ : "ನರಗುಂದದಲ್ಲಿ ನನ್ನ ಸಂಬಂಧಿಕರು ಹಲವರಿದ್ದಾರೆ. ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ. ಅಂದು ಬಿಜೆಪಿ ನಾಯಕನಾಗಿ ಬರ್ತಿದ್ದೆ. ಇಂದು ಕಾಂಗ್ರೆಸ್ ನಾಯಕನಾಗಿ ಬಂದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನರಗುಂದ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "30 ವರ್ಷ ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಅಂತಹ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಹೊರಗೆ ಹಾಕಿದ್ರು. ಅವರದ್ದು ಹಿಡನ್ ಅಜೆಂಡಾ. ಷಡ್ಯಂತ್ರ ಮಾಡಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲದಂತೆ ಮಾಡಿದ್ರು. ಏ. 12ನೇ ತಾರೀಖಿನಂದು ಚುನಾವಣಾ ಉಸ್ತುವಾರಿಗಳು ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಅಚ್ಚರಿ ಆಯ್ತು, ಜೊತೆಗೆ ಬೇಸರವಾಯ್ತು. ಜಗದೀಶ್ ಶೆಟ್ಟರ್ ಅವರೇ ಪಕ್ಷ ತೀರ್ಮಾನ ಮಾಡಿದೆ, ನಿಮಗೆ ಟಿಕೆಟ್ ಇಲ್ಲ, ನೀವು ತಕ್ಷಣವೇ ಪತ್ರಿಕಾ ಹೇಳಿಕೆ ಕೊಟ್ಟು ರಾಜಕೀಯ ನಿವೃತ್ತಿ ಆಗಬೇಕು. ಒಂದು ಲೆಟರ್ ಕಳಿಸಿ ಕೊಡ್ತೀನಿ, ಅದಕ್ಕೆ ಸಹಿ ಮಾಡಿ ಕಳಿಸಿ ಅಂದ್ರು. ಈ ರೀತಿ 30 ವರ್ಷದಿಂದ ಪಕ್ಷಕ್ಕಾಗಿ ದುಡಿದ ಲೀಡರ್ಗೆ ಅಪಮಾನ ಮಾಡೋದು ಎಷ್ಟು ಸರಿ?" ಎಂದು ವಾಗ್ದಾಳಿ ನಡೆಸಿದರು.
"10 ದಿನ ಮುಂಚೆಯೇ ಹೇಳಬಹುದಾಗಿತ್ತು, ಕರೆದು ಕೂರಿಸಿಕೊಂಡು ಮಾತನಾಡಬಹುದಾಗಿತ್ತು. ಗೌರವಯುತವಾಗಿ ಮಾತನಾಡಿಸಿದ್ದರೆ ನಾನು ಗೌರವಯುತವಾಗಿ ರಾಜಕೀಯ ನಿವೃತ್ತಿ ಆಗ್ತಿದ್ದೆ. ಬೆಳಗ್ಗೆ ಏಳು ಘಂಟೆಗೆ ಕಾಲ್ ಮಾಡಿ ಸಣ್ಣ ಹುಡುಗನಿಗೆ ಹೇಳಿದಂಗೆ ಹೇಳಿದಕ್ಕೆ ಬಹಳ ಬೇಜಾರು ಆಯ್ತು. ಯಾವ ಕಾರಣಕ್ಕಾಗಿ ನೀವು ಟಿಕೆಟ್ ಕೊಡೋದಿಲ್ಲ ಅಂತ ಕೇಳಿದೆ. 75 ವರ್ಷ ಆದವರಿಗೆ ಟಿಕೆಟ್ ಕೊಟ್ಟೀರಿ, ಜಗದೀಶ್ ಶೆಟ್ಟರ್ಗೆ ಯಾಕೆ ಇಲ್ಲ?, ನನ್ನ ಮೇಲೆ ಭ್ರಷ್ಟಾಚಾರದ ಕೇಸ್ಗಳು ಇದ್ದಾವಾ?. ಯಾವುದಾದರು ರೌಡಿ ಶೀಟರ್, ಕ್ರಿಮಿನಲ್ ಕೇಸ್ ಇದೆಯಾ?, ಯಾವುದೂ ಇಲ್ಲ. ಸಿಡಿ ಇದಾವೇನು ಅಂತಾ ಕೇಳಿದೆ. ಆರು ಜನ ಮಂತ್ರಿಗಳ ಸಿಡಿ ಇದಾವೆ. ಕೋರ್ಟ್ನಿಂದ ಸ್ಟೇ ತಂದಿದ್ದಾರೆ, ಅವರಿಗೆ ಟಿಕೆಟ್ ಕೊಟ್ಟಿದ್ದೀರಿ, ಜಗದೀಶ್ ಶೆಟ್ಟರ್ಗೆ ಯಾಕೆ ಇಲ್ಲ?" ಎಂದು ಪ್ರಶ್ನಿಸಿದೆ ಎಂದರು.
ಇದನ್ನೂ ಓದಿ : ಬಳ್ಳಾರಿ, ತುಮಕೂರಿನಲ್ಲಿಂದು ಮೋದಿ ಮತಬೇಟೆ: ಬೆಂಗಳೂರಿನಲ್ಲಿ ರಸ್ತೆ ಸಂಚಾರ ಬದಲಾವಣೆ
"ಚಿತ್ತಾಪುರದಲ್ಲಿ ರಾಠೋಡ್ ಎನ್ನುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರ ಮೇಲೆ 80 ಕೇಸ್ ಇದಾವೆ. ಜೊತೆಗೆ, ರೌಡಿ ಶೀಟರ್ ಆಗಿದ್ದಾರೆ. ಆದ್ರೆ, ಒಬ್ಬ ಸಚ್ಚಾರಿತ್ರ್ಯ ಉಳ್ಳ ಜಗದೀಶ್ ಶೆಟ್ಟರ್ಗೆ ಯಾಕೆ ಟಿಕೆಟ್ ಇಲ್ಲ?. ಇದಕ್ಕೆ ಬಿಜೆಪಿ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ನೀವು ಬೇಡ, ನಿಮ್ಮ ಸೊಸೆಗೆ ಟಿಕೆಟ್ ಕೊಡ್ತೀವಿ ಅಂದ್ರು. ಕುಟುಂಬ ರಾಜಕಾರಣ ಬೇಡ ಅಂತೀರಿ, ನಮ್ಮ ಸೊಸೆಗೆ ಯಾಕೆ ಕೊಡ್ತೀರಿ?. 75 ವರ್ಷ ಇದ್ದೋರನ್ನೇ ಬೇಡ ಅಂತೀರಿ, 76 ವರ್ಷದವರಿಗೆ ಕೊಟ್ಟೀರಿ? ಎಲ್ಲಿ ಹೋಯಿತು ನಿಮ್ಮ ಪ್ರಿನ್ಸಿಪಲ್? ಎಂದು ಕೇಳಿದೆ, ಆಗಲೂ ಉತ್ತರ ಕೊಡಲಿಲ್ಲ. ಬಳಿಕ, ನಮ್ಮ ಜನರಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ತೀರ್ಮಾನ ತೆಗೆದುಕೊಂಡೆ. 100 ವರ್ಷ ಇತಿಹಾಸ ಇರೋ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದೆ. ಸಿಎಂ ಸೇರಿ ಮೂರ್ನಾಲ್ಕು ಜನ ನಮ್ಮ ಮನೆಗೆ ಬಂದ್ರು. ನಿಮ್ಮನ್ನ ರಾಜ್ಯಸಭಾ ಮೆಂಬರ್ ಮಾಡ್ತೀವಿ ಅಂದ್ರು. ನಾನು ಜನರ ಮಧ್ಯೆ ಇದ್ದವನು, ರಾಜ್ಯಸಭಾ ಸದಸ್ಯನಾಗಿ ಮೂಲೇಲಿ ಕೂಡಬೇಕಾ?. ಇದು ಕೇವಲ ಜಗದೀಶ್ ಶೆಟ್ಟರ್ಗೆ ಆದ ಅನ್ಯಾಯ ಅಲ್ಲ. ಈ ಭಾಗಕ್ಕೆ, ಸಮುದಾಯಕ್ಕೆ ಆದಂತಹ ಅನ್ಯಾಯ" ಎಂದು ಹೇಳಿದರು.
"ಕಾಂಗ್ರೆಸ್ ಪಾರ್ಟಿಗೆ ಬದ್ಧನಾಗಿದ್ದೇನೆ. ಬೊಮ್ಮಾಯಿ ಅವರು ನನ್ನ ಕ್ಷೇತ್ರದಲ್ಲಿ ಓಡಾಡಿದ್ದಾರಂತೆ. ಶೆಟ್ಟರ್ ಕಾಂಗ್ರೆಸ್ಗೆ ಯಾಕೆ ಹೋದ್ರು ಅಂದ್ರಂತೆ, ಬೊಮ್ಮಾಯಿ ಅವರೇ ನೀವು 10-15 ವರ್ಷದ ಹಿಂದೆ ಬಿಜೆಪಿಗೆ ಬಂದವರು. ಬಿಜೆಪಿಗೆ ಬಂದ ಮೇಲೆ ನೀರಾವರಿ ಸಚಿವರಾದ್ರಿ, ಗೃಹ ಮಂತ್ರಿ ಆದ್ರಿ ಆಮೇಲೆ ಮುಖ್ಯಮಂತ್ರಿ ಆದ್ರಿ. ಎಲ್ಲಾ ಅಧಿಕಾರವನ್ನು ಉಂಡು ಈಗ ಹಿಂಗೆ ಮಾತಾಡೋದು ಬಿಡಿ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ರಾಜಕೀಯ ಧ್ರುವೀಕರಣ ಆಗುತ್ತಿದೆ. ಸಮುದಾಯ ಬದಲಾವಣೆ ಆಗ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ಅವರಿಗೆ ಮತ ಹಾಕಿ" ಎಂದು ಶೆಟ್ಟರ್ ಮನವಿ ಮಾಡಿದರು.