ಗದಗ: ನಗರದ ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಕಣಗಿನಹಾಳ ರಸ್ತೆಯವರೆಗೆ 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ರಾಜಕಾಲುವೆ ದುರಸ್ತಿನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೇವಲ 830 ಅಡಿಯ ಉದ್ದದ ಕಾಲುವೆಗೆ 10 ಅಡಿ ಅಗಲ ಕಟ್ಟಿ ದುಡ್ಡು ಹೊಡೆಯುವ ತಂತ್ರ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಇಡೀ ರಾಜಕಾಲುವೆ ನೀರಿನಿಂದ ತುಂಬಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತೆ. ಪಕ್ಕದ ಮನೆಗಳಿಗೆ ನೀರು ನುಗ್ಗುತ್ತೆ. ರಸ್ತೆಗೆ ಅಡ್ಡಲಾಗಿ ಪ್ರವಾಹ ಬಂದು ಸಂಚಾರಕ್ಕೆ ತೊಂದರೆಯಾಗುತ್ತದೆ. ಜೊತೆಗೆ ಕಳೆದ ವರ್ಷ ಓರ್ವ ವ್ಯಕ್ತಿ ಈ ಕಾಲುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.
ದುರಂತಗಳನ್ನು ತಪ್ಪಿಸೋಕೆ ಹಾಕಿಕೊಂಡಿರುವ ರಾಜ ಕಾಲುವೆ ಯೋಜನೆ ಕೇವಲ ನೆಪ ಮಾತ್ರಕ್ಕೆ ಎನ್ನಿಸುತ್ತಿದೆ. ಜೊತೆಗೆ ಕಾಲುವೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಹಾಗಾಗಿ ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡಿದ್ದು, ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.