ಗದಗ: ಸಂಪುಟ ಪುನಾರಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ದೊರೆತಿಲ್ಲ. ನಮ್ಮ ಮುಖ್ಯಮಂತ್ರಿಗಳು ಹೈಕಮಾಂಡ್ನೊಂದಿಗೆ ಏನೆಲ್ಲಾ ಮಾತುಕತೆ ನಡೆಸಿದ್ದಾರೆ, ಅದಕ್ಕೆ ಹೈಕಮಾಂಡ್ ಯಾವೆಲ್ಲಾ ಸೂಚನೆಗಳನ್ನು ನೀಡಿದೆ ಎಂಬುದರ ಬಗ್ಗೆ ನಾನು ಇದುವರೆಗೆ ತಿಳಿದುಕೊಂಡಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.
ಗದಗದ ತೋಟಂದಾರ್ಯ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮಣ್ಣ, ನಾನು ನಿನ್ನೆ ಬೆಂಗಳೂರಿನಿಂದ ಹೊರಟು ನಾಡಿದ್ದು ವಾಪಸಾಗಲಿದ್ದೇನೆ. ಆದ್ದರಿಂದ ಈ ಸಂಪುಟ ವಿಸ್ತರಣೆ, ಸಂಪುಟ ಪುನಾರಚನೆ ಬಗ್ಗೆ ನನಗೆ ಕಿಂಚಿತ್ತೂ ಮಾಹಿತಿ ಇಲ್ಲ. ಹೈಕಮಾಂಡ್ ಏನು ಹೇಳಿದೆಯೋ ಅಥವಾ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಏನು ಕೇಳಿದ್ದಾರೋ ಎಂಬ ಬಗ್ಗೆ ಮಾಹಿತಿ ಇಲ್ಲ. ಬೆಂಗಳೂರಿಗೆ ತೆರಳಿದ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಯತ್ನಾಳ್ ನಮ್ಮ ಪಕ್ಷದಲ್ಲಿ ಓರ್ವ ಹಿರಿಯ ರಾಜಕಾರಣಿ, ಈ ಹಿಂದೆ ಮಂತ್ರಿಯಾಗಿದ್ದವರು. ಪಕ್ಷದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ಹೈಕಮಾಂಡ್ ಬಗೆಹರಿಸಲಿದೆ. ಮುಂದಿನ ದಿನಗಳಲ್ಲೂ ಸಹ ನಮ್ಮ ನಾಯಕರು ಯತ್ನಾಳ್ರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಸದ್ಯದಲ್ಲೇ ಬದಲಾಗಲಿದ್ದಾರೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ನೀಡಿದ ಸೋಮಣ್ಣ, ಎಲ್ಲರಿಗೂ ರಾತ್ರಿ ಹೊತ್ತಿನಲ್ಲಿ ಕನಸು ಬಿದ್ದರೆ, ಸಿದ್ದರಾಮಯ್ಯ ಮಾತ್ರ ಹಗಲೇ ಕನಸು ಕಾಣುತ್ತಾರೆ. ಅದಕ್ಕೆ ಯಾರೂ ಹೊಣೆ ಅಲ್ಲ ಎಂದು ಕಿಚಾಯಿಸಿದ್ದಾರೆ.
ನಮ್ಮ ಸಮಾಜದಿಂದ ಬಂದಂತಹ ಎಲ್ಲಾ ಮುಖ್ಯಮಂತ್ರಿಗಳು ಸಹ ಜನರ ಏಳಿಗೆಗಾಗಿ ಶ್ರಮ ವಹಿಸುತ್ತಾರೆ. ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಏಳೆಂಟು ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆದ್ದರಿಂದ ಸಿಎಂ ಬದಲಾವಣೆ ಆಗುವ ಸಾಧ್ಯತೆಯೇ ಇಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.