ಗದಗ: ಅವರೆಲ್ಲ ಪೇಪರ್ ಆಯ್ದು ಜೀವನ ಮಾಡುವ ಜನ. ಗುಡಿಸಲಲ್ಲಿಯೇ ಕತ್ತಲು ಕಳೆದು ಬೆಳಕು ಹರಿಯುತ್ತಿದೆ. ಆದರೆ ಸರ್ಕಾರ ಮಾತ್ರ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದೆ. ಮನೆಗಳನ್ನೂ ಸಹ ಕಟ್ಟಿಸೋದಕ್ಕೆ ಮುಂದಾಗಿದೆ. ಕಳಪೆ ಕಾಮಗಾರಿಯಿಂದ ಹಸ್ತಾಂತರದ ಮುನ್ನವೇ ಹಲವು ಮನೆಗಳು ದುರಸ್ತಿಗೀಡಾಗಿವೆ.
ಓದಿ: ದರೋಡೆಗೆ ಹೊಂಚು ಹಾಕಿದ್ದ 13 ಜನರ ಬಂಧನ
ಗದಗ ಜಿಲ್ಲೆ ಗಾಂಧಿನಗರದ ಹರಿಣಶಿಕಾರಿ ಕಾಲೋನಿಯ ಜನರಿಗೆ ಅಲೆಮಾರಿ ಮತ್ತು ಅರೆ ಅಲೆಮಾರಿಗಳ ಅಭಿವೃದ್ಧಿ ವಿಶೇಷ ಕಾರ್ಯಕ್ರಮದಡಿ ಸುಮಾರು 109 ಮನೆ ನಿರ್ಮಾಣಕ್ಕೆ ಯೋಜನೆ ಮಂಜೂರಾಗಿದೆ. ಆದರೆ ಅಲ್ಲಿ ನಿರ್ಮಾಣವಾಗಿದ್ದು ಕೇವಲ 38. ಅವು ಸಹ ಕಳಪೆ ಕಾಮಗಾರಿಯಿಂದ ಕೂಡಿವೆ. ಅಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳೇ ಇಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ, ಕಿಟಕಿ ಬಾಗಿಲು ಕಿತ್ತು ಹೋಗಿವೆ. ಸ್ವಚ್ಛತೆ ಮೊದಲೇ ಇಲ್ಲ. ಅದರಲ್ಲಿಯೇ ವಾಸ ಮಾಡಿ ಎಂದು ಹಕ್ಕುಪತ್ರಗಳನ್ನೂ ಸಹ ವಿತರಿಸಿದ್ದಾರೆ. ಆದರೆ ಹಾವು-ಚೇಳುಗಳು ವಾಸ ಮಾಡುವಂತಹ ಜಾಗದಲ್ಲಿ ನಾವು ಹೇಗೆ ವಾಸಿಸುವುದು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ಒಂದೊಂದು ಮನೆಗೆ ಸರ್ಕಾರದ ವೆಚ್ಚ 5.90 ಲಕ್ಷ ರೂ. ಆಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 4.36 ಲಕ್ಷ, ನಗರಸಭೆಯಿಂದ 1.63 ಲಕ್ಷ ರೂ. ಸೇರಿ ಒಟ್ಟು 5.99 ಲಕ್ಷ ರೂ. ಮಂಜೂರಾಗಿದೆ. ಆದರೆ ಇವುಗಳ ಪರಿಸ್ಥಿತಿ ನೋಡಿದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆದಿದ್ದಾರೆ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಸುಮಾರು 51 ಲಕ್ಷ ರೂ., ಬಡಾವಣೆ ರಚನೆ 5 ಲಕ್ಷ ರೂ., ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸೇರಿ ಒಟ್ಟು 75 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ಕೇವಲ ಕೆಲವೇ ಕೆಲವು ಮನೆಗಳನ್ನ ಕಟ್ಟಿಸಿ ಉಳಿದವುಗಳನ್ನು ಪಿಲ್ಲರ್ ಹಾಕಿ ಹಾಗೆಯೇ ಬಿಡಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಕೊರೊನಾ ಹಿನ್ನೆಲೆ ಹಿನ್ನಡೆಯಾಗಿದೆ. ನಾಳೆ ಸ್ಥಳ ಪರಿಶೀಲನೆ ಮಾಡಿ ಆದಷ್ಟು ಕೆಲಸ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ.