ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟ ಮಟ್ಟ ತಲುಪಿದೆ. ಆದರೆ, ರಾಜ್ಯದ ಹಣಕಾಸಿನ ಸ್ಥಿತಿ ಸುಸ್ಥಿತಿಯಲ್ಲಿದೆ. ಆಲ್ ಇಸ್ ವೆಲ್ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಈ ರೀತಿ ಹೇಳುವುದನ್ನು ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಟ್ಟ ಗ್ಯಾರಂಟಿ ಜೊತೆಗೆ ಪ್ರಣಾಳಿಕೆಯ ಭರವಸೆ ಈಡೇರಿಸದ ನೀವು ಈಗ ಹೊಸದಾಗಿ ಹೊಸ ಭರವಸೆ ಕೊಡಲು ಹೊರಟಿದ್ದೀರಾ? ಈ ರಾಜ್ಯದ ಜನರನ್ನು ನೀವು ಬಿಕ್ಷುಕರು ಎಂದುಕೊಂಡಿರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ: ಕಳೆದ ಐದಾರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಿಲ್ಲ. ಅಕ್ಕಿ ಬದಲು ನೀಡುತ್ತಿದ್ದ ಹಣ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿಯನ್ನು 22 ರೂ.ಗೆ ಕೊಡಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆದರೆ ಅದನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯ 7 ಸಾವಿರ ಕೋಟಿ ರೂ. ಬಾಕಿಯನ್ನು ರಾಜ್ಯ ಸರ್ಕಾರ ನೀಡಬೇಕಿದೆ. ರಾಜ್ಯ ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.
ವಿದ್ಯುತ್ ಇಲಾಖೆಗೆ ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆಗ್ರಹದ ಮೇರೆಗೆ ಮೆಟ್ರೋ ದರ ಹೆಚ್ಚಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಈ ತಂತ್ರ ಮಾಡುತ್ತಿದೆ. ಎಸ್ಸಿಪಿ-ಟಿಎಸ್ಪಿ ಹಣ ದುರುಪಯೋಗ ಆಗಿದೆ. ಅದು ಗ್ಯಾರಂಟಿಗೆ ಬಳಕೆ ಆಗಿದೆ. ಆ ಸಮುದಾಯದ ಮುಖಂಡರು ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದರು.
ಲೋಕಸಭಾ ಚುನಾವಣೆ, ಉಪ ಚುನಾವಣೆ ಬಂದಾಗ ಎರಡು ದಿನಗಳ ಮೊದಲು ಗೃಹಲಕ್ಷ್ಮೀ ಹಣ ತಲುಪುತ್ತದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿಯೂ ಹಾಗೆಯೇ ಮಾಡುತ್ತೀರಿ. ನೀವು ರಾಜ್ಯದ ಬಡವರು, ರೈತರನ್ನು ಭಿಕ್ಷುಕರು ಎಂದು ಕೊಂಡಿದ್ದೀರಾ? ಎಂದು ಪ್ರಶ್ನಿಸಿದ ವಿಜಯೇಂದ್ರ, ಗೌರವಧನಕ್ಕಾಗಿ ಶಿಕ್ಷಕರು ಧರಣಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಯಾರ ಕಿವಿಗೆ ಹೂ ಮುಡಿಸುತ್ತಿದ್ದೀರಿ?: ಸಿಎಂ ಸುಳ್ಳಿನ ಸರದಾರರು. ಎಸ್ಟಿ ಪಂಗಡದವರಿಗೆ ಸರ್ಕಾರಿ ಕಾಂಟ್ರಾಕ್ಟ್ ಮೌಲ್ಯವನ್ನು ಒಂದು ಕೋಟಿ ರೂ.ಗಳಿಂದ ಎರಡು ಕೋಟಿಗೆ ಹೆಚ್ಚಳ ಮಾಡುವ ಮಾತನ್ನು ಸಿಎಂ ಹೇಳಿದ್ದಾರೆ. ಸ್ವಾಮಿ ಸಿದ್ದರಾಮಯ್ಯ ಅವರೇ, ಯಾರ ಕಿವಿಗೆ ಹೂ ಮುಡಿಸುತ್ತಿದ್ದೀರಿ. ನಿಮಗೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗುತ್ತಿಲ್ಲ. ನೀವು ಈಗ ಸುಳ್ಳು ಹೇಳಿ ಅಪರಾಧ ಮಾಡುತ್ತಿದ್ದೀರಿ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಈ ಸರ್ಕಾರ ಬಂದ ಬಳಿಕ ಭೀಕರ ಬರಗಾಲದ ಸೂಚನೆಗಳು ಕಾಣುತ್ತಿವೆ. ಸರ್ಕಾರ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕಿದೆ. ಜನ ಸೇವೆ ಮರೆತು ನಿದ್ರೆಯಲ್ಲಿರುವ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಸಿಎಂಗೆ ಕುರ್ಚಿ ಸಂಕಟ: ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರ ಬೆಂಬಲಕ್ಕೆ ಸಚಿವರು ಹೋಗಿ ನಿಲ್ಲುವಂತೆ ಮಾಡಬೇಕು. ಆದರೆ ಸಿಎಂಗೆ ಕುರ್ಚಿ ಸಂಕಟ ಎದುರಾದಂತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಅವರು ಹೇಳುತ್ತಿದ್ದಾರೆ. ನಮ್ಮ ಗಲಾಟೆ ಮಧ್ಯೆ ಆ ಪೈಪೋಟಿ ಕಾಣುತ್ತಿರಲಿಲ್ಲ. ಈಗ ಅದು ಬಹಿರಂಗವಾಗಿದೆ. ಮತ್ತೊಂದು ಕಡೆ ಸಿದ್ದರಾಮಯ್ಯರ ಬೆಂಬಲಿಗರು ದೆಹಲಿಗೆ ಹೋಗಿ ಹೈಕಮಾಂಡ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ರಾಜ್ಯದಲ್ಲಿ ಬಹಳ ಕ್ಷಿಪ್ರ ಬೆಳವಣಿಗೆಗಳು ನಡೆಯಲಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಕುರ್ಚಿ ಗಟ್ಟಿಯಾಗಿದೆ ಎಂಬುದು ಸತ್ಯಕ್ಕೆ ದೂರವಾದುದು. ಈಗ ಅವರ ಪರ ವಕಾಲತ್ತು ವಹಿಸುತ್ತಿರುವವರೂ ಅದೇ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂಬುದನ್ನು ಅವರು ಅರಿತುಕೊಳ್ಳಬೇಕಿದೆ. ಎಚ್ಚೆತ್ತು ಹೆಜ್ಜೆ ಇಡಬೇಕಿದೆ ಎಂದು ವಿಜಯೇಂದ್ರ ಸಲಹೆ ಕೊಟ್ಟರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಗೋಪಾಲಯ್ಯ, ಸಂಸದ ಪಿ.ಸಿ.ಮೋಹನ್ ಹಾಜರಿದ್ದರು.
ಇದನ್ನೂ ಓದಿ: ಮಲಪ್ರಭಾ ಜಲಾಶಯದಿಂದ ಇನ್ನೂ 15 ದಿನ ಕಾಲುವೆಗಳಿಗೆ ನೀರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ