ಗದಗ: ಪೊಲೀಸರು ಅಂದರೆ ಕೇವಲ ಲಾಠಿ ಹಿಡಿದು ಹೊಡೆಯವವರು. ಕಂಡ ಕಂಡಲ್ಲಿ ಅಡ್ಡ ಕೈ ಹಾಕಿ ಗಾಡಿ ಹಿಡಿಯೋರು. ಇನ್ನೇನು ರೂಲ್ಸ್ ಹೇಳಿ ಫೈನ್ ಹಾಕೋವ್ರು. ಹೀಗೆ ನಾನಾ ಕಾರಣಗಳಿಂದ ಬಹುತೇಕ ಚಾಲಕರಿಗೆ ಪೊಲೀಸರು ಅಂದರೆ ಭಯ, ಒಳಗೊಳಗೆ ಸಿಟ್ಟು ಇರುತ್ತದೆ. ಆದರೆ ಇದಕ್ಕೆ ಗದಗ ಪೊಲೀಸರು ಅಪವಾದ ಅಂತಾನೆ ಹೇಳಬಹುದು.
ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಜನ ಭಯ ಪಡುತ್ತಾರೆ. ಅದರಲ್ಲೂ ಯಾವುದೇ ದಾಖಲೆ ಇಲ್ಲರಿರುವವರಂತೂ ಓಡಿನೇ ಹೊಗ್ತಾರೆ. ಆದರೆ ನಾವು ನಿಮ್ಮ ಶತ್ರುಗಳಲ್ಲ, ನಿಮ್ಮ ಮಿತ್ರರೆ ಎನ್ನುತ್ತಿದ್ದಾರೆ ಗದಗ ಪೊಲೀಸರು. ಚಾಲಕರ ಹಿತಕ್ಕಾಗಿ ನಗರದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಗದಗ ಪೊಲೀಸ್ ಇಲಾಖೆ, ಗದಗ-ಬೆಟಗೇರಿ ಅವಳಿ ನಗರದ ಆಟೋ, ಲಾರಿ ಚಾಲಕರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು. ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಎಸ್ಪಿ ಯತೀಶ್ ಉದ್ಘಾಟನೆ ಮಾಡಿದರು. ಆಟೋ, ಲಾರಿ ಚಾಲಕರು ಸದಾ ಒತ್ತಡದಲ್ಲಿ ಸೇವೆ ಮಾಡ್ತಾರೆ. ಅವರ ಆರೋಗ್ಯ ಅತಿ ಮುಖ್ಯ. ಹಾಗಾಗಿ ಚಾಲಕರು, ಕುಟುಂಬಸ್ಥರು ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿದರು.
ಪೊಲೀಸ್ ಇಲಾಖೆ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಆಟೋ ಚಾಲಕರು, ಕೆಎಸ್ಆರ್ಟಿಸಿ ಚಾಲಕರು ಭಾಗಿಯಾಗಿದ್ದರು. ಇದೇ ವೇಳೆ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕೂಡ ಬಿಪಿ ಶುಗರ್ ಸೇರಿದಂತೆ ಹಲವು ತಪಾಸಣೆ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸರಿ ಮಾರ್ಗದಲ್ಲಿ ಇಬ್ಬರು ಸಾಗೋಣ ಎಂದು ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಲಬ್ ಗೋಡೆ ತುಂಬಾ ಸಾರಿಗೆ ಸುರಕ್ಷಿತ ಹಲವು ನುಡಿಮುತ್ತುಗಳನ್ನು ಪ್ರದರ್ಶಿಸಲಾಯಿತು. ಬಹಳ ಕಡೆ ಕೇವಲ ಕಾಟಾಚಾರಕ್ಕೆ ಮಾಡುವ ಸರ್ಕಾರಿ ಕಾರ್ಯಕ್ರಮಗಳ ನಡುವೆ ಇದೊಂದು ಈ ಸಮಾರಂಭ ವಿಶೇಷವಾಗಿತ್ತು.