ಗದಗ: ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದ್ರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಬೇಸತ್ತು ರೋಗಿಗಳು ಕಣ್ಣೀರು ಹಾಕುತ್ತಿದ್ದಾರೆ.
ಆಸ್ಪತ್ರೆಯ ಕಾರಿಡಾರ್ನಲ್ಲೇ ರೋಗಿಗಳಿಗೆ ಡ್ರಿಪ್, ರಕ್ತ ಕೊಡುತ್ತಿರುವ ದೃಶ್ಯ ನೋಡಿದ್ರೆ ಇದು ಆಸ್ಪತ್ರೆಯೋ ನರಕವೋ ಎನ್ನುವಂತಿದೆ. ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ರು ಕ್ಯಾರೆ ಅನ್ನದ ವೈದ್ಯಾಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿನನಿತ್ಯ ಹತ್ತಾರು ಹಳ್ಳಿಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರ್ತಾರೆ. ಆದ್ರೆ ಇಲ್ಲಿ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿದೆ. 100 ಬೆಡ್ ಆಸ್ಪತ್ರೆ ಇದಾಗಿದೆ. ಇಲ್ಲಿ ಬರೋ ಬಡ ರೋಗಿಗಳ ಪಾಡು ದೇವರೇ ಬಲ್ಲ ಎಂಬಂತಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ. ಶುದ್ಧ ನೀರಿನ ಘಟಕ ಉದ್ಘಾಟನೆ ಆದ ಒಂದೇ ತಿಂಗಳಲ್ಲಿ ಬಂದ್ ಆಗಿದ್ದು, ರೋಗಗಿಗಳು ಹಣ ಕೊಟ್ಟು ನೀರು ಕುಡಿಯುವಂತಾಗಿದೆ. ಸರ್ಕಾರ ಬಡ ರೋಗಿಗಳ ಚಿಕಿತ್ಸೆಗಾಗಿ ಕೋಟಿ, ಕೋಟಿ ಅನುದಾನ ಬಿಡುಗಡೆ ಮಾಡುತ್ತೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಬಡವರಿಗೆ ತಲುಪುತ್ತಿಲ್ಲ ಎಂದು ಆಸ್ಪತ್ರೆಗೆ ಬರುವ ಜನ ದೂರುತ್ತಾರೆ.
ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರು ತಮ್ಮ ರೋಗಿಗಳಿಗೆ ಹಾಕಿರುವ ಡ್ರಿಪ್ ತಗೆಯುವ ಕೆಲಸ ಮಾಡುತ್ತಾರೆ. 10 ಜನ ವೈದ್ಯರು ಕಾರ್ಯನಿರ್ಹಿಸುವಂತಹ ಆಸ್ಪತ್ರೆ ಇದು. ಆದ್ರೆ, ಇಲ್ಲಿ ಒಬ್ಬರು ಎಂಬಿಬಿಎಸ್, ಇಬ್ಬರು ಆರ್ಯುವೇದಿಕ್ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.