ಗದಗ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ರಾಜ್ಯ ಸರ್ಕಾರ ನಿಯಂತ್ರಿಸುವ ರಿಮೋಟ್ ಮಾತ್ರ ಇನ್ನೊಬ್ಬರ ಕೈಯಲ್ಲಿದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಲೇವಡಿ ಮಾಡಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಸೂಪರ್ ಸಿಎಂನಂತೆ ವರ್ತಿಸುತ್ತಿದ್ದು, ರಾಜ್ಯ ಸರ್ಕಾರದ ಸೂತ್ರಧಾರಿಯಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಸಿಎ ಆಗಿದ್ದಾಗ ಎರಡ್ಮೂರು ದಿನಗಳಲ್ಲಿ ಪ್ರಧಾನಿಗಳ ಭೇಟಿಗೆ ಅವಕಾಶ ದೊರೆಯುತ್ತಿತ್ತು. ಆದರೆ, ಇದೀಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯಡಿಯೂರಪ್ಪನವರಿಗೆ ಪ್ರಧಾನಿಗಳ ಭೇಟಿಗೆ ಅವಕಾಶ ದೊರೆಯುತ್ತಿಲ್ಲ ಎಂದು ಲೇವಡಿ ಮಾಡಿದರು.
ನೆರೆ ಹಾಗೂ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆಯೇ ಜನರಲ್ಲಿ ಮೂಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ತಂದು ರಾಜ್ಯಪಾಲರಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುತ್ತಿದೆ. ಶಾಸನ ಸಭೆಗಳಲ್ಲಿ ವಿಸ್ತೃತ ಚರ್ಚೆ ಮೂಲಕ ನಿರ್ಧಾರವಾಗಬೇಕಿದ್ದ ಮಹತ್ವದ ಕಾಯ್ದೆಗಳನ್ನು ಹಿಂಭಾಗಿಲಿನಿಂದ ತಿದ್ದುಪಡಿಗೊಳಿಸಿರುವುದು ಜನವಿರೋಧಿ ನೀತಿಯಾಗಿದೆ. ಸರ್ಕಾರದ ಈ ನಡೆ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ವರದಾನವಾಗಲಿದ್ದು, ರೈತರ ಪಾಲಿಗೆ ಮರಣ ಶಾಸನ ಬರೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ವೇತ ಪತ್ರಕ್ಕೆ ಆಗ್ರಹ:
ಈ ಹಿಂದಿನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಆಗಿರುವಷ್ಟು ಅಭಿವೃದ್ಧಿಯೂ ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಈ ಭಾಗದ ಜನರು ತತ್ತರಿಸಿದ್ದಾರೆ. ಆದರೆ, ತಾತ್ಕಾಲಿಕ ಪರಿಹಾರ ನೀಡಿದ ಸರ್ಕಾರ ಶಾಶ್ವತ ಪರಿಹಾರಕ್ಕೆ ಒತ್ತು ನೀಡಿಲ್ಲ. ಇದರಿಂದಾಗಿ ಈ ಭಾಗದ ಜನರು ಮತ್ತೆ ಪ್ರವಾಹದ ಆತಂಕ ಎದುರಿಸುವಂತಾಗಿದೆ. ರಾಜ್ಯದಲ್ಲಿ ಪ್ರವಾಹ ಪ್ರದೇಶದಲ್ಲಿ ಕೈಗೊಂಡ ಶಾಶ್ವತ ಪರಿಹಾರದ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.