ಗದಗ: ಇಂದಿನಿಂದಲೇ ನಗರದ ಜಿಮ್ಸ್ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆ ಕೇಂದ್ರ ಆರಂಭಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ. ಈ ಕುರಿತು ಗದಗನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ಮುಂದೆ ಮುಖ್ಯವಾಗಿ ಟೆಸ್ಟ್ಗಳು ಬಹಳ ಬೇಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತವೆ. ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಗೆ ಪಾಸಿಟಿವ್ ರಿಪೋರ್ಟ್ ಬಂದಿರೋದು ದುರದೃಷ್ಟಕರ.
ನಿನ್ನೆ ರಾತ್ರಿ 12ರ ಸುಮಾರಿಗೆ ಈ ರಿಪೋರ್ಟ್ ಬಂದಿದ್ದು, ಮೂರು ವರದಿಗಳ ಕೇಂದ್ರ ಬಿಂದು ರಂಗನವಾಡಿ ಏರಿಯಾ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ. ರಂಗನವಾಡಿ ಏರಿಯಾವನ್ನು ಖಾಲಿ ಮಾಡಿ ಅಲ್ಲಿಂದ ಶಿಪ್ಟ್ ಮಾಡಲು ತೀರ್ಮಾನ ಸಹ ಮಾಡಲಾಗಿದೆ ಎಂದಿದ್ದಾರೆ.
ಈಗಾಗಲೇ 70 ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ, ರಿಪೋರ್ಟ್ಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಇದೆ 20ರಿಂದ ಮಧ್ಯಾಹ್ನ 2ರ ವರೆಗೆ ಪೆಟ್ರೋಲ್ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಹೂವು ಬೆಳೆಗಾರರಿಗೆ ತೊಂದರೆಯಾಗ್ತಿತ್ತು. ಅವರಿಗೂ ತಮ್ಮ ಹೂಗಳನ್ನು ಮಾರಲು 2 ಗಂಟೆ ವರೆಗೆ ಅವಕಾಶ ಕೊಡ್ತಿದ್ದೇವೆ. ಇನ್ನು ತರಕಾರಿ ಮಾರುಕಟ್ಟೆಯಲ್ಲಿ ಕೆಲವು ನಿಬಂಧನೆಗೊಳಪಟ್ಟು ಅವಕಾಶ ಮಾಡಿ ಕೊಡಲಾಗುವುದು.
ಇನ್ನು ಹೊಳೆ ಆಲೂರು ಗ್ರಾಮದಲ್ಲಿ ಮೂರು ಜನರಿದ್ದ ಕುಟುಂಬವೊಂದಕ್ಕೆ 350 ರೂಪಾಯಿ ಕಿಟ್ ಹಂಚಿ ಹೋಗಿದ್ದಾರೆ. ಇದರಲ್ಲಿ ಭಯ ಪಡುವಂತಹದ್ದೇನಿಲ್ಲ. ಇವರು ಹಂಚಿದ ಸಮಯ ರಾತ್ರಿಯಾಗಿದ್ದರಿಂದ ಹಾಗೆ ವಿಶೇಷವಾಗಿ ಒಂದೇ ಸಮೂಹದ ಜನರಿಗೆ ಹಂಚಿದ್ದಾರೆ. ಹಾಗಾಗಿ ಊಹಾಪೋಹಗಳಿಗೆ ನಾಂದಿಯಾಗಿದೆ. ಅದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ.