ಗದಗ : ಗುಜರಾತ್ ವಿಧಾನಸಭಾ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಲ್ಲೀನರಾಗಿದ್ದಾರೆ. ಈ ಚುನಾವಣೆ ಬಳಿಕ ವರಿಷ್ಠರ ಜೊತೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈ ಬಗ್ಗೆ ತಮಗೆ ಮೊದಲೇ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಹಿಂದೂ ಪದವನ್ನು ಅಶ್ಲೀಲ ಎಂದು ಹೇಳುವವರ ಯೋಚನೆಯಲ್ಲೇ ಹೊಲಸಿದೆ. ಇದು ಮಾತಿನಲ್ಲಿ ಅಭಿವ್ಯಕ್ತವಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಕಿಡಿಕಾರಿದರು. ಹಿಂದೂ ಧರ್ಮ ಎಲ್ಲರ ನಂಬಿಕೆಯ ವಿಶ್ವಾಸದ ಧರ್ಮ. ಇಂತಹ ನಂಬಿಕೆಯ ವಿಶ್ವಾಸದ ಬುನಾದಿಯನ್ನು ಪ್ರಶ್ನೆ ಮಾಡಿದ್ದು, ಅತ್ಯಂತ ಖಂಡನೀಯ. ಅವರ ಮನಸ್ಸಿನಲ್ಲೇ ಹೊಲಸಿರುವುದರಿಂದ ಈ ರೀತಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿಲ್ಲ : ಇನ್ನು ಆಚ್ಚರಿಯ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಮೌನವಹಿಸಿದೆ ದೇಶಾದ್ಯಂತ ವಿರೋಧ ವ್ಯಕ್ತವಾದರೂ ಈ ಬಗ್ಗೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಒಂದೇ ಒಂದು ಮಾತನ್ನು ಆಡಿಲ್ಲ. ಇನ್ನು, ಭಾರತ ಜೋಡೋ ಯಾತ್ರೆ ಮಾಡಿದವರಿಗೆ ಇದು ಭಾರತ ಒಡೆಯುವ ಕೆಲಸ ಎಂದು ಗೊತ್ತಾಗಿಲ್ವಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಭಾರತ್ ತೋಡೋ ಮಾಡಿಕೊಂಡೇ ಬಂದಿದೆ ಎಂದು ಹೇಳಿದ್ರು.
2023 ಕ್ಕೆ ಅಧಿಕಾರಕ್ಕೆ ಬರುವುದು ನಮ್ಮ ಉದ್ದೇಶ : ಇನ್ನು, ಜನಸಂಕಲ್ಪಯಾತ್ರೆಯ ಮೊದಲ ಸಭೆ ಶಿರಹಟ್ಟಿಯಲ್ಲಿ ತಾಲೂಕಿನಲ್ಲಿ ನಡೆಯಲಿಕ್ಕಿದೆ. ಈ ಹಿಂದೆ ನಡೆದ ಜನಸಂಕಲ್ಪ ಯಾತ್ರೆಗೆ ಅಪಾರ ಜನ ಬೆಂಬಲ ಸಿಕ್ಕಿದೆ. ಇನ್ನು ನವೆಂಬರ್ ತಿಂಗಳಲ್ಲಿ ಸಂಕಲ್ಪಯಾತ್ರೆ ಮುಗಿಸಿ, ಬಳಿಕ ಡಿಸೆಂಬರ್ ನಲ್ಲಿ ನಾನು ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ರಥಯಾತ್ರೆ ಮಾಡುವುದಾಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ ಅವರ ಬೆಂಬಲವನ್ನು ಯಾಚಿಸಲಿದ್ದೇವೆ. 2023ಕ್ಕೆ ಅಧಿಕಾರಕ್ಕೆ ಬರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಏನಾಗಿದೆ ಅಂತಾ ಗೊತ್ತಿಲ್ಲ. ಅವರು ಸಿಎಂ ಆಗಿದ್ದಾಗ ಜನಾಶೀರ್ವಾದ ಯಾತ್ರೆ ಮಾಡಿದ್ದರು. ಆದರೆ ಜನ ಆಶೀರ್ವಾದ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಜಾರಕಿಹೊಳಿ ಹಿಂದೂ ಪದ ಬಳಕೆ ವೈಯಕ್ತಿಕ ವಿಚಾರ, ಕಾಂಗ್ರೆಸ್ಗೆ ಸಂಬಂಧಿಸಿದ್ದಲ್ಲ: ಡಿಕೆಶಿ