ಗದಗ: ಲಿಂಗಾಯತ ಸಮುದಾಯದ ಹಿಂದುಳಿದವರ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಲಕ್ಷ್ಮೇಶ್ವರ ತಾಲೂಕಿನ ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸ್ವಾಗತ ಮಾಡಿದ್ದಾರೆ.
ನಿಗಮ ಸ್ಥಾಪನೆಗೆ ಇಂದು ಆದೇಶ ಹೊರಡಿಸಿದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಸ್ವಾಮೀಜಿ, ಮುಖ್ಯಮಂತ್ರಿಗಳಿಗೆ ಸಮಸ್ತ ವೀರಶೈವ ಲಿಂಗಾಯತ ಧರ್ಮದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ದಶಕಗಳ ಕನಸನ್ನು ನನಸು ಮಾಡಿದ್ದಾರೆ. ಹಾಗಾಗಿ ಎಲ್ಲಾ ವೀರಶೈವ ಮಠಾಧೀಶರ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದ್ದಾರೆ.
ಯಡಿಯೂರಪ್ಪನವರು ಎಲ್ಲಾ ಸಮಾಜಗಳನ್ನು ಸಮಾನ ದೃಷ್ಟಿಯಲ್ಲಿ ನೋಡುತ್ತಾರೆ. ಎಲ್ಲಾ ಸಮಾಜಗಳಿಗೂ ಸಮಾನ ಗೌರವ ಕೊಡುತ್ತಾರೆ. ನಿನ್ನೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಬಹುಸಂಖ್ಯಾತರಾಗಿದ್ದರೂ ಬಹಳಷ್ಟು ಜನ ಹಿಂದುಳಿದಿದ್ದಾರೆ. ಅವರಿಗೆ ದೇವರು ಆಯುಸ್ಸು ಆರೋಗ್ಯ ಕರುಣಿಸಲಿ ಎಂದರು.